‘ಒಬ್ಬರಾದ ಮೇಲೆ ಒಬ್ಬರು ಹೋಗುತ್ತಿದ್ದಾರೆ’; ರಾಜೇಶ್ ನಿಧನಕ್ಕೆ ಕಂಬನಿ ಮಿಡಿದ ಎಸ್. ನಾರಾಯಣ್
‘ಓಲ್ಡ್ ಮಾಂಕ್’ ಚಿತ್ರದಲ್ಲಿ ‘ಕಲಾ ತಪಸ್ವಿ’ ರಾಜೇಶ್ ಮತ್ತು ಎಸ್. ನಾರಾಯಣ್ ನಟಿಸಿದ್ದಾರೆ. ಆದರೆ ಒಟ್ಟಿಗೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಸಿಗಲಿಲ್ಲ.
ಹಿರಿಯ ನಟ ರಾಜೇಶ್ (Kalatapasvi Rajesh) ಇನ್ನಿಲ್ಲ ಎಂಬ ಸುದ್ದಿ ಕೇಳಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. 82ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜೇಶ್ ಅವರು ಫೆ.19ರಂದು ನಿಧನರಾದರು. ಹಲವು ದಶಕಗಳ ಕಾಲ ಚಿತ್ರರಂಗಕ್ಕೆ ಅವರು ಸೇವೆ ಸಲ್ಲಿಸಿದ್ದರು. ಡಾ. ರಾಜ್ಕುಮಾರ್ ಕಾಲದಿಂದ ಇತ್ತೀಚೆಗಿನ ‘ಓಲ್ಡ್ ಮಾಂಕ್’ (Old Monk Movie) ಸಿನಿಮಾದವರೆಗೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು. ಈ ಚಿತ್ರದಲ್ಲಿ ಎಸ್. ನಾರಾಯಣ್ ಕೂಡ ನಟಿಸಿದ್ದು, ರಾಜೇಶ್ ಕುರಿತು ಕೆಲವು ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ‘ತುಂಬ ಜನರನ್ನು ನಾವು ಕಳೆದುಕೊಂಡೆವು. ಕಣ್ಣ ಮುಂದೆಯೇ ಒಬ್ಬರಾದ ಮೇಲೆ ಒಬ್ಬರು ಹೋಗುತ್ತಿದ್ದಾರೆ. ಸಹ-ನಿರ್ದೇಶಕನಾಗಿ ನಾನು ಅವರ ಜೊತೆ ಕೆಲಸ ಮಾಡಿದ್ದೆ. ಎಲ್ಲಿ ಸಿಕ್ಕರೂ ಚೆನ್ನಾಗಿ ಮಾತನಾಡಿಸುತ್ತಿದ್ದರು. ಅಂದಿನ ಕಾಲದಲ್ಲಿ ‘ಕ್ರಾಂತಿವೀರ’ ಚಿತ್ರದಲ್ಲಿ ಡಾ. ರಾಜ್ಕುಮಾರ್ ಅವರಿಗೆ ಸರಿಸಮನಾಗಿ ರಾಜೇಶ್ ನಟಿಸಿದ್ದರು. ಅಂಥ ಒಳ್ಳೆಯ ಕಲಾವಿದರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ’ ಎಂದು ಎಸ್. ನಾರಾಯಣ್ ಹೇಳಿದ್ದಾರೆ. ‘ಓಲ್ಡ್ ಮಾಂಕ್’ ಚಿತ್ರದಲ್ಲಿ ರಾಜೇಶ್ ಮತ್ತು ಎಸ್. ನಾರಾಯಣ್ (S Narayan) ನಟಿಸಿದ್ದಾರೆ. ಆದರೆ ಒಟ್ಟಿಗೆ ತೆರೆಹಂಚಿಕೊಳ್ಳುವ ಅವಕಾಶ ಸಿಗಲಿಲ್ಲ. ‘ಅವರು ನಟಿಸಿದ ಚಿತ್ರದಲ್ಲಿ ನಾನೂ ಇದ್ದೇನೆ ಎಂಬುದೇ ನನಗೆ ಹೆಮ್ಮೆ’ ಎಂದು ಎಸ್. ನಾರಾಯಣ್ ಹೇಳಿದ್ದಾರೆ.
ಇದನ್ನೂ ಓದಿ:
ಪುನೀತ್-ರಾಜೇಶ್ ಕೊನೇ ಭೇಟಿಯ ಕ್ಷಣಗಳು; ಅಗಲಿದ ಸಾಧಕರಿಗೆ ಇದು ಚಿತ್ರನಮನ
‘ಕಲಾತಪಸ್ವಿ’ ರಾಜೇಶ್ ಅಂತ್ಯಸಂಸ್ಕಾರ; ಮಾವನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಅರ್ಜುನ್ ಸರ್ಜಾ