ಶಿವಮೊಗ್ಗ ನಗರ ಈಗ ಶಾಂತ, ಶಾಲಾ ಕಾಲೇಜುಗಳು ಸೋಮವಾರದಿಂದ ಪುನರಾರಂಭಗೊಂಡಿವೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 28, 2022 | 7:01 PM

ವಿದ್ಯಾರ್ಥಿನಿಯರು ಸಹ ನಿರಾತಂಕದಿಂದ ಕಾಲೇಜಿಗೆ ಬರುತ್ತಿದ್ದಾರೆ. ಕಾಲೇಜು ಅವರಣವೂ ಪ್ರಶಾಂತವಾಗಿದೆ. ಆದರೆ, ತನ್ನ ತಂದೆಯೊಂದಿಗೆ ಬಂದಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಹಿಜಾಬ್ ಧರಿಸಿರುವುದರಿಂದ ಆಕೆಗೆ ಪ್ರವೇಶ ನಿರಾಕರಿಸಲಾಗಿದೆ.

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ (Harsha murder) ಹಿನ್ನೆಲೆಯಲ್ಲಿ ಪಕ್ಷುಬ್ಧಗೊಂಡಿದ ಶಿವಮೊಗ್ಗ ನಗರ ಒಂದು ವಾರದ ನಂತರ ಸಹಜ ಸ್ಥಿತಿಗೆ ಮರಳಿದೆ. ಸೋಮವಾರದಿಂದ ಶಾಲಾ ಕಾಲೇಜುಗಳು ಪುನರಾರಂಭಗೊಂಡಿವೆ. ಶಿವಮೊಗ್ಗದ ಟಿವಿ9 ವರದಿಗಾರ ನಗರದ ಎರಡು ಕಾಲೇಜುಗಳಲ್ಲಿ ಸೋಮವಾರ ವಾತಾವರಣ ಹೇಗಿತ್ತು ಅನ್ನೋದನ್ನು ವಿವರಿಸುವ ವಿಡಿಯೋ ಕಳಿಸಿದ್ದಾರೆ. ಮೊದನೆಯದ್ದು ಸರಕಾರಿ ಪ್ರಥಮ ದರ್ಜೆ (government first grade college) ಕಾಲೇಜು. ನಿಮಗೆ ಕಾಣುತ್ತಿರುವ ಮಕ್ಕಳು ಕಾಲೇಜಿಗೆ ಬರುತ್ತಿದ್ದಾರೆ. ವಿದ್ಯಾರ್ಥಿನಿಯರು ಸಹ ನಿರಾತಂಕದಿಂದ ಕಾಲೇಜಿಗೆ ಬರುತ್ತಿದ್ದಾರೆ. ಕಾಲೇಜು ಅವರಣವೂ ಪ್ರಶಾಂತವಾಗಿದೆ. ಆದರೆ, ತನ್ನ ತಂದೆಯೊಂದಿಗೆ ಬಂದಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಹಿಜಾಬ್ (hijab) ಧರಿಸಿರುವುದರಿಂದ ಆಕೆಗೆ ಪ್ರವೇಶ ನಿರಾಕರಿಸಲಾಗಿದೆ. ಕಾಲೇಜಿನೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಲಾಗದು ಎಂದು ಗೊತ್ತಿದ್ದರೂ ಈ ವಿದ್ಯಾರ್ಥಿನಿ ಅದನ್ನು ಧರಿಸಿ ಬಂದಿದ್ದಾಳೆ.

ಆಕೆಯ ತಂದೆ ಹೇಳುತ್ತಿರುವಂತೆ ವಿದ್ಯಾರ್ಥಿನಿಯ ಪರೀಕ್ಷೆ ನಡೆಯುತ್ತಿವೆ ಮತ್ತು ಸೋಮವಾರ ಆಕೆ ಎರಡು ಪರೀಕ್ಷೆಗಳನ್ನು ಬರೆಯಬೇಕಿತ್ತು. ವಿದ್ಯಾರ್ಥಿನಿಯ ತಂದೆ ಪುನಃ ಅದೇ ಪ್ರಶ್ನೆ ಕೇಳುತ್ತಾರೆ-ಹಿಜಾಬ್ ಧರಿಸಿದರೆ ಏನು ತೊಂದರೆ, ಯಾಕೆ ಒಳಗೆ ಹೋಗಿ ಪರೀಕ್ಷೆ ಬರೆಯಲು ಆವಕಾಶ ಕೊಡುತಿಲ್ಲ?

ಆದರೆ ಹೈಕೋರ್ಟ್ ಹಾಗೆ ಹೇಳಿರುವುದರಿಂದ ಕಾಲೇಜಿನವರನ್ನು ದೂರಲಾಗದು. ಸೋಜಿಗದ ವಿಷಯವೆಂದರೆ ಅವರು ತಮ್ಮ ಮಗಳನ್ನು ವಾಪಸ್ಸು ಕರೆದುಕೊಂಡು ಹೋಗುತ್ತಾರೆ!

ಇದೇ ವಿಡಿಯೋನಲ್ಲಿ ಮತ್ತೊಂದು ಕಾಲೇಜಿನ ದೃಶ್ಯವಿದೆ-ದೇಶೀಯ ವಿದ್ಯಾಶಾಲಾ ಸಮಿತಿ. ಇದು ಖಾಸಗಿ ಶಿಕ್ಷಣ ಸಂಸ್ಥೆಯಾಗುರುವುದರಿಂದ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಕಾಲೇಜಿನೊಳಗೆ ಪ್ರವೇಶಿಸದಂತೆ ಯಾರೂ ತಡಯುತ್ತಿಲ್ಲ. ಹಿಜಾಬ್ ಧರಿಸಲು ಅನುಮತಿ ನೀಡುವುದು ಬಿಡುವುದು ಆಯಾ ಖಾಸಗಿ ಶಾಲಾ ಕಾಲೇಜುಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.

ಇದನ್ನೂ ಓದಿ:   ಹಿಜಾಬ್ ಸಂಘರ್ಷ! ಶಿವಮೊಗ್ಗದಲ್ಲಿ ಕಾಲೇಜು ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ