ಬೆಂಗಳೂರು: ಪ್ರಧಾನಿ ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ

Updated on: Aug 10, 2025 | 6:04 PM

ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಿ ನಮ್ಮ ಮೆಟ್ರೋ ಹಳದಿ ರೈಲು ಮಾರ್ಗ ಮತ್ತು ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ನಮ್ಮ ಮೆಟ್ರೋ ಯೋಜನೆಯ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಅವರ ಬೆಂಗಾವಲು ವಾಹನ ಸಂಚರಿಸುತ್ತಿದ್ದಾಗ ಒಬ್ಬ ಯುವಕ ಬ್ಯಾರಿಕೇಡ್ ಜಂಪ್ ಮಾಡಲು ಯತ್ನಿಸಿದ್ದನ್ನು ಪೊಲೀಸರು ತಡೆದರು.

ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಲೈನ್​, ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಜೊತೆಗೆ, ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಎಲ್ಲ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಪ್ರಧಾನಿ ಮೋದಿಯವರು ಮಧ್ಯಾಹ್ನ 2:40ರ ಸುಮಾರಿಗೆ ಕಾರಿನಲ್ಲಿ ಐಐಐಟಿ ಆಡಿಟೋರಿಯಂ ನಿಂದ ಹೆಚ್​ಎಲ್​ ವಿಮಾನ ನಿಲ್ದಾಣಕ್ಕೆ ತೆರಳಿದರು.

ಪ್ರಧಾನಿ ನರೇಂದ್ರ ಮೋದಿಯವರು ತೆರಳು ರಸ್ತೆಯ ಅಕ್ಕಪಕ್ಕದಲ್ಲಿ ಬ್ಯಾರಿಕೇಡ್​ ಹಾಕಲಾಗಿತ್ತು. ಸೌತ್ ಎಂಡ್ ಸರ್ಕಲ್ ಬಳಿ ಪ್ರಧಾನಿ ಮೋದಿಯವರ ಬೆಂಗಾವಲು ವಾಹನ ತೆರಳುತ್ತಿದ್ದ ವೇಳೆ ಯುವಕನೋರ್ವ ಬ್ಯಾರಿಕೇಡ್​ ಜಂಪ್​ ಮಾಡಲು ಯತ್ನಿಸಿದನು. ಬ್ಯಾರಿಕೇಡ್ ಜಂಪ್ ಮಾಡಲು ಯತ್ನಿಸಿದ ಯುವಕನನ್ನು ಪೊಲೀಸರು ತಡೆದರು. ಪೊಲೀಸರು ತಕ್ಷಣ ಯುವಕನನ್ನು ಸ್ಥಳದಿಂದ ಹೊರಗೆ ಕಳುಹಿಸಿದರು.