ಸಾವಿರಾರು ಪ್ರವಾಸಿಗರು ಬರುವ ಹಳೇಬೀಡು ದೇಗುಲದಲ್ಲೂ ಭದ್ರತಾ ಲೋಪ, ಸಿಸಿಟಿವಿ ಕ್ಯಾಮರಾಗಳೂ ನಿಷ್ಕ್ರಿಯ!
ರಾಷ್ಟ್ರೀಯ ಭದ್ರತಾ ಕಟ್ಟೆಚ್ಚರದ ನಡುವೆಯೂ, ಹಾಸನ ಜಿಲ್ಲೆಯ ವಿಶ್ವ ಪರಂಪರಾ ತಾಣ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಈ ಸ್ಥಳದಲ್ಲಿ, ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಮೆಟಲ್ ಡಿಟೆಕ್ಟರ್‌ಗಳಿಲ್ಲ. ಇದು ಸಾರ್ವಜನಿಕರ ಆಕ್ರೋಶ ಮತ್ತು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಪುರಾತತ್ವ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳು ಮೂಡಿವೆ.
ಹಾಸನ, ನವೆಂಬರ್ 12: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದ ಸ್ಫೋಟದ ನಂತರ, ದೇಶಾದ್ಯಂತ ಪ್ರಮುಖ ನಗರಗಳು ಮತ್ತು ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಆದರೆ, ಹಾಸನ ಜಿಲ್ಲೆಯಲ್ಲಿರುವ ವಿಶ್ವ ಪರಂಪರಾ ತಾಣವಾದ ಹಳೇಬೀಡಿನಲ್ಲಿ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಒಂದು ವರ್ಷದ ಹಿಂದೆ ವಿಶ್ವ ಪರಂಪರಾ ಪಟ್ಟಿಗೆ ಸೇರ್ಪಡೆಗೊಂಡ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ದೇಶಿ ಮತ್ತು ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರಸ್ತುತ, ಅಕ್ಟೋಬರ್ ಅಂತ್ಯದಿಂದ ಜನವರಿವರೆಗೆ ಇಲ್ಲಿ ಪ್ರವಾಸೋದ್ಯಮದ ಸಮಯವಾಗಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ, ದೇವಾಲಯದ ಆವರಣದಲ್ಲಿರುವ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಹಿಂದಿದ್ದ ಮೆಟಲ್ ಡಿಟೆಕ್ಟರ್‌ಗಳು ಕೂಡ ಈಗ ಕೆಲಸ ಮಾಡುತ್ತಿಲ್ಲ ಅಥವಾ ಇಲ್ಲವೇ ಇಲ್ಲ. ಇದರಿಂದಾಗಿ ಯಾರು ಬೇಕಾದರೂ ಯಾವುದೇ ತಪಾಸಣೆಯಿಲ್ಲದೆ ದೇವಾಲಯವನ್ನು ಪ್ರವೇಶಿಸಬಹುದು ಅಥವಾ ನಿರ್ಗಮಿಸಬಹುದು. ಈ ನಿರ್ಲಕ್ಷ್ಯವು ಸಾರ್ವಜನಿಕರ ಆಕ್ರೋಶ ಮತ್ತು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
