ಅಪ್ಪು ಕುಟುಂಬ ಅತೀವ ವೇದನೆ ಮತ್ತು ಸಂಕಟದಲ್ಲಿದೆ, ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡು ಸಂಕಟ ಹೆಚ್ಚಿಸಬೇಡಿ: ತಾರಾ ಅನುರಾಧ
ಅಭಿಮಾನಿಗಳು ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡಿದರೆ, ಅವರಿಗೆ ಮತ್ತಷ್ಟು ಸಂಕಟವಾಗುತ್ತದೆ. ಕುಟುಣಬಕ್ಕೆ ಈಗ ಅಭಿಮಾನಿಗಳ ಸಪೋರ್ಟ್ ಬೇಕಿದೆ ಅಂತ ತಾರಾ ಹೇಳಿದರು.
ಕರಾಳ ಶುಕ್ರವಾರ ಕಳೆದು ಮತ್ತೊಂದು ಶುಕ್ರವಾರ ಬಂದಿದೆ. ಹೋದ ಶುಕ್ರವಾರ ಈ ಸಮಯದಲ್ಲೇ ಕನ್ನಡನಾಡಿನ ಪ್ರೀತಿಯ ಕುವರ, ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ಅವರ ಆಕಸ್ಮಿಕ ಮರಣದ ಸುದ್ದಿ ಕರ್ನಾಟಕದ ಮೇಲೆ ಬರಸಿಡಿಲಿನಂತೆ ಬಂದೆರಗಿತ್ತು. ಕೇವಲ 46-ವರ್ಷ-ವಯಸ್ಸಿನ ಅಪ್ಪು ತಮ್ಮ ಪತ್ನಿ-ಮಕ್ಕಳು, ಅಣ್ಣಂದಿರಾದ ಶಿವಣ್ಣ, ರಾಘಣ್ಣ ಹಾಗೂ ಅವರ ಕುಟುಂಬಗಳು, ಅಪಾರ ಬಂಧು-ಬಳಗ, ಕನ್ನಡ ಚಿತ್ರರಂಗ ಹಾಗೂ ಕೋಟ್ಯಾಂತರ ಅಭಿಮಾನಿಗಳು ಅಗಲಿದ ದಿನವದು. ಎಲ್ಲರೂ ಅವರಿಗಾಗಿ ಕಂಬನಿ ಮಿಡಿಯುತ್ತಲೇ ಇದ್ದಾರೆ. ಹಾಗೆಯೇ, ಸ್ಯಾಂಡಲ್ ವುಡ್ ಕಲಾವಿದರು, ಬೇರೆ ಚಿತ್ರರಂಗದ ನಟ-ನಟಿಯರು, ಪುನೀತ್ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಪೋಷಕ ನಟಿ ತಾರಾ ಅನುರಾಧ ಅವರು ಶುಕ್ರವಾರ ಪುನೀತ್ ಅವರ ಮನೆಗೆ ಭೇಟಿ ನೀಡಿದ್ದರು. ವಾಪಸ್ಸು ಹೋಗುವಾಗ ಅವರು ಮಾಧ್ಯಮದ ಮೂಲಕ ಅಭಿಮಾನಿಗಳಿಗೆ ಮನಸ್ಥಿತಿ ಮೇಲೆ ನಿಯಂತ್ರಣ ಕಳೆದುಕೊಂಡು ಆತ್ಮಹತ್ಯೆಯಂಥ ಮೂರ್ಖತನದ ಪ್ರಯತ್ನಗಳನ್ನು ಮಾಡಬೇಡಿ ಎಂದು ಅಪೀಲ್ ಮಾಡಿದರು.
ಅಪ್ಪು ಅವರನ್ನು ಕಳೆದುಕೊಂಡು ಆವರ ಕುಟುಂಬ ಈಗಾಗಲೇ ಬಹಳ ಸಂಕಟಪಡುತ್ತಿದೆ, ಅಭಿಮಾನಿಗಳು ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡಿದರೆ, ಅವರಿಗೆ ಮತ್ತಷ್ಟು ಸಂಕಟವಾಗುತ್ತದೆ. ಕುಟುಣಬಕ್ಕೆ ಈಗ ಅಭಿಮಾನಿಗಳ ಸಪೋರ್ಟ್ ಬೇಕಿದೆ ಅಂತ ತಾರಾ ಹೇಳಿದರು.
ಪುನೀತ್ ಅವರ ಪತ್ನಿ ಅಶ್ವಿನಿಯವರನ್ನು ಮಾತಾಡಿಸಿಕೊಂಡು ಹೋಗಲು ಬಂದಿದ್ದು ಎಂದು ಹೇಳಿದ ತಾರಾ ಅವರು, ದುಃಖವನ್ನು ತಡೆದುಕೊಳ್ಳಲು ಅವರಿಗೆ ಈಗಲೂ ಸಾಧ್ಯವಾಗುತ್ತಿಲ್ಲ ಎಂದರು. ಅಶ್ವಿನಿಗೆ ತಂದೆ-ತಾಯಿಗಳು ಅತ್ಯುತ್ತಮ ಸಂಸ್ಕಾರ ನೀಡಿ ಬೆಳಸಿದ್ದಾರೆ. ಆದರೆ ಅವರಿಗೆ ನೋವು ನಿಭಾಯಿಸಲು, ಪರಿಸ್ಥಿತಿಯೊಂದಿಗೆ ಏಗಲು ಸಾಧ್ಯವಾಗುತ್ತಿಲ್ಲ. ಭಗವಂತ ಅವರಿಗೆ ದುಃಖ ಭರಿಸುವ ಶಕ್ತಿ ನೀಡಲಿ.
ಅಶ್ವಿನಿ ಮೇಲೆ ಅನೇಕ ಜವಾಬ್ದಾರಿಗಳಿವೆ. ಅವೆಲ್ಲವನ್ನು ಸಮರ್ಥವಾಗಿ ನಿಭಾಯಿಸುವಂತಾಗಲು ಅವರಿಗೆ ಸೈರಣೆ ಮತ್ತು ಬಲವನ್ನು ದೇವರು ಒದಗಿಸಲಿ ಅಂದರು.
ಕನ್ನಡ ಚಿತ್ರರಂಗ ಪವರ್ ಕಳೆದುಕೊಂಡಿದೆ, ದೇವರು ಆ ಪವರ್ ಅನ್ನು ಮತ್ಯಾವ ರೀತಿಯಲ್ಲಿ ವಾಪಸ್ಸು ಕೊಡುತ್ತಾನೆಯೋ ಎಂದು ಹೇಳಿದ ತಾರಾ, ಅಪ್ಪು ಅವರ ಅಂತ್ಯಕ್ರಿಯೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಇದನ್ನೂ ಓದಿ: ಜೊತೆ ಕಲಾವಿದರ ಬಗ್ಗೆ ಪುನೀತ್ ರಾಜಕುಮಾರ್ಗೆ ಇನ್ನಿಲ್ಲದ ಕಾಳಜಿ ಮತ್ತು ಪ್ರೀತಿ, ವಿಡಿಯೋ ನೋಡಿ