ತುಮಕೂರಿನ ಸ್ಮಾರ್ಟ್ ಸಿಟಿ ಉದ್ಘಾಟನಾ ಸಮಾರಂಭದಿಂದ ಸಚಿವ ಮಾಧುಸ್ವಾಮಿ ಮುನಿದಸ್ವಾಮಿಯಾಗಿ ಹೊರನಡೆದರು!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 06, 2022 | 11:49 PM

ಸಂಪುಟದಲ್ಲಿ ಬುದ್ಧಿಜೀವಿ ಎನಿಸಿಕೊಂಡ ಸಚಿವರು ಸಹ ಚಿಕ್ಕ ಮಕ್ಕಳ ಹಾಗೆ ಆಡುತ್ತಿರುವುದನ್ನು ನೋಡುತ್ತಿದ್ದರೆ ಕನ್ನಡಿಗರಲ್ಲಿ ಹೇವರಿಕೆ ಹುಟ್ಟುತ್ತದೆ. ರಾಜ್ಯ ಬಿಜೆಪಿ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅದನ್ನು ಒಂದು ಸರ್ಕಾರೀ ಕಾರ್ಯಕ್ರಮದಲ್ಲಿ, ಸಾರ್ವಜನಿಕವಾಗಿ ಅದರಲ್ಲೂ ವಿಶೇಷವಾಗಿ ಶಾಲಾ-ಕಾಲೇಜು ಮಕ್ಕಳ ಮುಂದೆ ಪ್ರದರ್ಶಿಸುವುದು ಬಾಲಿಷತನ ಅನಿಸಿಕೊಳ್ಳುತ್ತದೆ.

ಭಾರತೀಯ ಜನತಾ ಪಕ್ಷದ ವರಿಷ್ಠರು ತುಮಕೂರಿನಲ್ಲಿ ಗುರುವಾರ ನಡೆದ ಸ್ಮಾರ್ಟ್ ಸಿಟಿ ಉದ್ಘಾಟನಾ ಸಮಾರಂಭವನ್ನೇನಾದರೂ ವೀಕ್ಷಿಸಿದರೆ, ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಸಂಪುಟ ಸಚಿವರಾಗಿರುವ ಒಂದಿಬ್ಬರನ್ನು ದೆಹಲಿಗೆ ಕರೆಸಿ ನೀರಿಳಿಸಿ ಕಳಿಸುತ್ತಿದ್ದರು. ಸಚಿವ ಸ್ಥಾನದಿಂದ ಗೇಟ್ ಪಾಸ್ ನೀಡುವ ನಿರ್ಣಯ ತೆಗೆದುಕೊಂಡರೂ ಆಶ್ಚರ್ಯ ಪಡಬೇಕಿಲ್ಲ. ಸಂಪುಟದಲ್ಲಿ ಬುದ್ಧಿಜೀವಿ ಎನಿಸಿಕೊಂಡ ಸಚಿವರು ಸಹ ಚಿಕ್ಕ ಮಕ್ಕಳ ಹಾಗೆ ಆಡುತ್ತಿರುವುದನ್ನು ನೋಡುತ್ತಿದ್ದರೆ ಕನ್ನಡಿಗರಲ್ಲಿ ಹೇವರಿಕೆ ಹುಟ್ಟುತ್ತದೆ. ರಾಜ್ಯ ಬಿಜೆಪಿ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅದನ್ನು ಒಂದು ಸರ್ಕಾರೀ ಕಾರ್ಯಕ್ರಮದಲ್ಲಿ, ಸಾರ್ವಜನಿಕವಾಗಿ ಅದರಲ್ಲೂ ವಿಶೇಷವಾಗಿ ಶಾಲಾ-ಕಾಲೇಜು ಮಕ್ಕಳ ಮುಂದೆ ಪ್ರದರ್ಶಿಸುವುದು ಬಾಲಿಷತನ ಅನಿಸಿಕೊಳ್ಳುತ್ತದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮತ್ತು ತುಮಕೂರು ಸಂಸದ ಜಿ ಎಸ್ ಬಸವರಾಜ ಅವರ ನಡುವೆ ಅದೇನು ಬೇಯುತ್ತಿದೆ ಅಂತ ಅರ್ಥವಾಗುತ್ತಿಲ್ಲ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರ ಬಗ್ಗೆಯೂ ಮಾಧುಸ್ವಾಮಿ ಅವರಿಗೆ ಮುನಿಸಿರುವಂತಿದೆ.

ಗುರುವಾರದಂದು ಸ್ಮಾರ್ಟ್ ಸಿಟಿ ಉದ್ಘಾಟನಾ ಸಮಾರಂಭದಲ್ಲಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಮೊದಲು ವೇದಿಕೆ ಮೇಲಿದ್ದ ಮಾಧುಸ್ವಾಮಿಗೆ ಅದೇನಾಯಿತೋ? ವೇದಿಕೆಯಿಂದ ಕೆಳಗಿಳಿದು ದುರದುರನೆ ಹೊರನಡೆದರು.

ಕಾರ್ಯಕ್ರಮ ಮುಗಿದ ನಂತರ ಜತೆಗೆ ಹೋಗೋಣ ಅಂತ ಭೈರತಿ ಬಸವರಾಜ ಕರೆಯುತ್ತಿದ್ದರೂ ಅದಕ್ಕೆ ಓಗೊಡದ ಮಾಧುಸ್ವಾಮಿ ಕಾರು ಹತ್ತಿ ಹೊರಟು ಹೋದರು. ಈ ಘಟನೆ ಒಂದು ಕೆಟ್ಟ ಪ್ರಿಸಿಡೆಂಟ್​ಗೆ ನಾಂದಿಯಾಗುವ ಸಾಧ್ಯತೆ ಇದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಾಧುಸ್ವಾಮಿ ಅವರು ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಬೇಕಿದೆ ಎಂಬ ನೆಪ ಹೇಳಿ ಹೊರಬಿದ್ದರಂತೆ. ಅವರು ಯಾವ ಕಾರಣಕ್ಕಾದರೂ ಹೋಗಲಿ ಪ್ರಶ್ನೆ ಅದಲ್ಲ, ಒಬ್ಬ ಸಚಿವ ಮತ್ತು ಹಿರಿಯ ನಾಯಕ ಹೀಗೆ ಸಾರ್ವಜನಿಕವಾಗಿ ಮಕ್ಕಳಂತೆ ವರ್ತಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ.

ಇದನ್ನೂ ಓದಿ:   ನಾಯಿಯ ಮುಖದಂತೆ ಕಾಣುವ ಪ್ರಾಣಿಯ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು: ವಿಡಿಯೋದಲ್ಲೇನಿದೆ?

Published on: Jan 06, 2022 11:48 PM