ದಾವಣಗೆರೆ: ಗೋಡೆ ಮೇಲಿಂದ ಜಿಗಿದು ಅತ್ಯಾಚಾರ ಆರೋಪಿ ಪರಾರಿ, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
ದಾವಣಗೆರೆ ನಗರದ ಉಪಕಾರಾಗೃಹ ಗೋಡೆ ಮೇಲಿಂದ ಜಿಗಿದು ಆರೋಪಿ ಪರಾರಿಯಾಗಿದ್ದಾನೆ. ಪರಾರಿ ಆಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಲಿಗೆ ಪೆಟ್ಟಾದ್ರು ಎಲ್ಲಿಯೂ ಕೂರದೆ ಕುಂಟುತ್ತಲೇ ಓಡಿ ಹೋಗಿ ಆಟೋ ಹತ್ತಿ ಎಸ್ಕೇಪ್ ಆಗಿದ್ದಾನೆ. ಆರೋಪಿ ನಾಪತ್ತೆಯಾದ ಕೆಲ ಹೊತ್ತಿನ ಬಳಿಕ ಜೈಲು ಸಿಬ್ಬಂದಿಗೆ ಮಾಹಿತಿ ಸಿಕ್ಕಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾವಣಗೆರೆ, ಆ.27: ಅತ್ಯಾಚಾರ ಪ್ರಕರಣದ ಆರೋಪಿ ಜೈಲಿನಿಂದ ಪರಾರಿಯಾಗಿದ್ದಾನೆ. ದಾವಣಗೆರೆ ನಗರದ ಉಪಕಾರಾಗೃಹ ಗೋಡೆ ಮೇಲಿಂದ ಜಿಗಿದು ಆರೋಪಿ ಪರಾರಿಯಾಗಿದ್ದಾನೆ. ಪರಾರಿ ಆಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಲಿಗೆ ಪೆಟ್ಟಾದ್ರು ಎಲ್ಲಿಯೂ ಕೂರದೆ ಕುಂಟುತ್ತಲೇ ಓಡಿ ಹೋಗಿ ಆಟೋ ಹತ್ತಿ ಎಸ್ಕೇಪ್ ಆಗಿದ್ದಾನೆ. ವಸಂತ್(23) ಪರಾರಿಯಾದ ಆರೋಪಿ.
ದಾವಣಗೆರೆ ನಗರದ ಹೊರವಲಯದ ಕರೂರ ಪ್ರದೇಶದ ನಿವಾಸಿಯಾಗಿರುವ ವಸಂತ್ ವೃತ್ತಿಯಿಂದ ಆಟೋ ಚಾಲಕ. ಕಳೆದ ಎರಡು ದಿನಗಳ ಹಿಂದೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ಈತನ ಮೇಲೆ ದೂರು ದಾಖಲಾಗಿತ್ತು. ದೂರು ದಾಖಲಾದ ಹಿನ್ನೆಲೆ ಮಹಿಳಾ ಠಾಣೆ ಪೊಲೀಸರು ವಸಂತ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ನಿನ್ನೆ(ಆ.26) ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಉಪ ಕಾರಾಗೃಹದ ಗೋಡೆ ಜಿಗಿದು ಆರೋಪಿ ವಸಂತ್ ಪರಾರಿಯಾಗಿದ್ದಾನೆ. ಗೋಡೆ ಮೇಲಿಂದ ಜಿಗಿದ ಪರಿಣಾಮ ಕಾಲಿಗೆ ಪೆಟ್ಟಾಗಿದ್ದು ನೋವನ್ನೂ ಲೆಕ್ಕಿಸದೆ ಓಡಿ ಆಟೋ ಹತ್ತಿ ಪರಾರಿಯಾಗಿದ್ದಾನೆ. ಆರೋಪಿ ನಾಪತ್ತೆಯಾದ ಕೆಲ ಹೊತ್ತಿನ ಬಳಿಕ ಜೈಲು ಸಿಬ್ಬಂದಿಗೆ ಮಾಹಿತಿ ಸಿಕ್ಕಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ಮತ್ತೆ ಯಾರಿಗಾದ್ರು ತೊಂದರೆ ಮಾಡಬಹುದು ಎಂಬ ಶಂಕೆ ವ್ಯಕ್ತವಾಗಿದೆ.