ಅರ್ಧಶತಕ ಜತೆ ಶತಕ ಸಿಡಿಸಿದ ಶಾರ್ದೂಲ್ ಠಾಕೂರ್
Shardul Thakur Century: ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಶಾರ್ದೂಲ್ ಠಾಕೂರ್, ದ್ವಿತೀಯ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದಾರೆ. ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಶಾರ್ದೂಲ್ ಠಾಕೂರ್ 17 ಫೋರ್ಗಳೊಂದಿಗೆ ಅಜೇಯ 113 ರನ್ ಬಾರಿಸಿದರು. ಈ ಮೂಲಕ ದ್ವಿತೀಯ ದಿನದಾಟದ ಮುಕ್ತಾಯದ ವೇಳೆಗೆ ಮುಂಬೈ ತಂಡವು 7 ವಿಕೆಟ್ ಕಳೆದುಕೊಂಡು 274 ರನ್ ಕಲೆಹಾಕಿದೆ.
ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ನಲ್ಲಿ ರೋಹಿತ್ ಶರ್ಮಾ (3), ಯಶಸ್ವಿ ಜೈಸ್ವಾಲ್ (4), ಶ್ರೇಯಸ್ ಅಯ್ಯರ್ (11) ಒಳಗೊಂಡ ಮುಂಬೈ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಇದಾಗ್ಯೂ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾರ್ದೂಲ್ ಠಾಕೂರ್ 57 ಎಸೆತಗಳಲ್ಲಿ 51 ರನ್ ಬಾರಿಸಿ ಮಿಂಚಿದರು. ಈ ಅರ್ಧಶತಕದ ನೆರವಿನಿಂದ ಮುಂಬೈ ತಂಡವು ಮೊದಲ ಇನಿಂಗ್ಸ್ನಲ್ಲಿ 120 ರನ್ ಕಲೆಹಾಕಿತು.
ಇನ್ನು ಮೊದಲ ಇನಿಂಗ್ಸ್ ಆಡಿದ ಜಮ್ಮು-ಕಾಶ್ಮೀರ ತಂಡವು 206 ರನ್ಗಳಿಸಿ ಆಲೌಟ್ ಆಗಿದೆ. 86 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ಈ ಬಾರಿ ಅಗ್ರಪಂಕ್ತಿಯ ಬ್ಯಾಟರ್ಗಳು ಕೈಕೊಟ್ಟಿದ್ದಾರೆ. 91 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕಣಕ್ಕಿಳಿದ ಶಾರ್ದೂಲ್ ಠಾಕೂರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಶಾರ್ದೂಲ್ ಠಾಕೂರ್ 17 ಫೋರ್ಗಳೊಂದಿಗೆ ಅಜೇಯ 113 ರನ್ ಬಾರಿಸಿದರು. ಈ ಮೂಲಕ ದ್ವಿತೀಯ ದಿನದಾಟದ ಮುಕ್ತಾಯದ ವೇಳೆಗೆ ಮುಂಬೈ ತಂಡವು 7 ವಿಕೆಟ್ ಕಳೆದುಕೊಂಡು 274 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಶಾರ್ದೂಲ್ ಠಾಕೂರ್ (113) ಹಾಗೂ ತನುಷ್ ಕೋಟ್ಯಾನ್ (58) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.