ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ

Updated By: ವಿವೇಕ ಬಿರಾದಾರ

Updated on: Jul 27, 2025 | 5:50 PM

ಶಿವಮೊಗ್ಗದಲ್ಲಿ ಇತ್ತೀಚೆಗೆ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ರಾಗಿಗುಡ್ಡದಲ್ಲಿ ಬಟ್ಟೆ ಕಳ್ಳತನ, ಕೋಟೆ ಗಂಗೂರು ದೇವಸ್ಥಾನದಲ್ಲಿ ಹುಂಡಿ ಒಡೆದು ನಗದು ದೋಚುವಿಕೆ ಮತ್ತು ವಡ್ಠಿನಕೊಪ್ಪದಲ್ಲಿ ಸಶಸ್ತ್ರ ಗ್ಯಾಂಗ್ ಓಡಾಡಿದ ಘಟನೆಗಳು ನಡೆದಿವೆ. ಈ ಎಲ್ಲಾ ಘಟನೆಗಳ ಸಿಸಿಟಿವಿ ದೃಶ್ಯಾವಳಿಗಳು ದೊರೆತಿವೆ ಮತ್ತು ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಘಟನೆಗಳು ನಗರದಲ್ಲಿ ಭಯ ಮತ್ತು ಆತಂಕವನ್ನು ಹುಟ್ಟುಹಾಕಿವೆ.

ಶಿವಮೊಗ್ಗ, ಜುಲೈ 27: ಶಿವಮೊಗ್ಗದ (Shivamogga) ರಾಗಿಗುಡ್ಡ (Ragigudda) ಬಡಾವಣೆಯ 9 ನೇ ತಿರುವಿನಲ್ಲಿರುವ ಮನೆಯೊಂದರ ಮುಂದೆ ಒಣಗಲು ಹಾಕಿದ್ದ ಬಟ್ಟೆಗಳನ್ನು ಚಡ್ಡಿಯಲ್ಲಿ ಬಂದ ಓರ್ವ ವ್ಯಕ್ತಿ ಕದ್ದುಕೊಂಡು ಪರಾರಿಯಾಗಿದ್ದಾನೆ. ಸಾಧಿಕ್ ವುಲ್ಲಾ ಎಂಬುವರ ಮನೆ ಮುಂಭಾಗ ಒಣಗಲು ಹಾಕಿದ್ದ ಸುಮಾರು 40 ಸಾವಿರಕ್ಕೂ ಹೆಚ್ಚು ಮೌಲ್ಯದ ಬಟ್ಟೆಗಳನ್ನು ಕದ್ದು ಆರೋಪಿ ಪರಾರಿಯಾಗಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರ ಬೆನ್ನಲ್ಲೇ ಶಿವಮೊಗ್ಗದ ಹೊರವಲಯದ ಕೋಟೆ ಗಂಗೂರು ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಕಳ್ಳರು ದೇವಸ್ಥಾನದ ಹುಂಡಿ ಒಡೆದು ನಗದು ದೋಚಿದ್ದರು. ಕಳ್ಳತನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಿವಮೊಗ್ಗ ನಗರದ ಹೊರವಲಯದ ವಡ್ಠಿನಕೊಪ್ಪದಲ್ಲಿ ತಡರಾತ್ರಿ ಬನಿಯನ್ ಮತ್ತು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ, ಸೊಂಟದಲ್ಲಿ ಮಾರಕಾಸ್ತ್ರ ಇಟ್ಟುಕೊಂಡು ಗ್ಯಾಂಗ್​ವೊಂದು ಓಡಾಡಿತ್ತು. ಕಳ್ಳರ ಗ್ಯಾಂಗ್​ ಓಡಾಟದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎಲ್ಲ ಘಟನೆಗಳ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಎರಡು ಮತ್ತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 27, 2025 05:49 PM