ಶಿವಮೊಗ್ಗದಲ್ಲಿ ‘ಆಹಾರ ದಸರಾ’: 2 ನಿಮಿಷದಲ್ಲಿ 12 ಇಡ್ಲಿ ತಿಂದು ಕಮಾಲ್ ಮಾಡಿದ ಸಂಚಾರಿ ಪೊಲೀಸ್ ಪ್ರವೀಣ್
ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿದ್ದ 'ಆಹಾರ ದಸರಾ'ದಲ್ಲಿ ಇಡ್ಲಿ ಮತ್ತು ಬಾಳೆಹಣ್ಣು ತಿನ್ನುವ ಸ್ಪರ್ಧೆಗಳು ಸಾರ್ವಜನಿಕರನ್ನು ಸೆಳೆದವು. ಸಾರ್ವಜನಿಕರು, ಯುವಕ-ಯುವತಿಯರು ಹಾಗೂ ಸಂಚಾರಿ ಪೊಲೀಸರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಕೇವಲ 2 ನಿಮಿಷಗಳಲ್ಲಿ ಹೆಚ್ಚು ತಿನ್ನುವ ನಿಯಮವಿತ್ತು. ಪ್ರವೀಣ್ ಪಾಟೀಲ್ (ಪೊಲೀಸ್) 12 ಇಡ್ಲಿ, ಮಿಥುನ್ 11.75 ಇಡ್ಲಿ ಹಾಗೂ ಎಚ್.ಸಿ. ರಾಧಾ 7.5 ಬಾಳೆಹಣ್ಣು ತಿಂದು ವಿಜೇತರಾದರು. ಇದು ದಸರಾ ಉತ್ಸವಕ್ಕೆ ರಂಗು ನೀಡಿತು.
ಶಿವಮೊಗ್ಗ, ಅ.17: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ವಿಜೃಂಭಣೆಯಿಂದ ಆಯೋಜಿಸಲಾಗಿದ್ದ ‘ಆಹಾರ ದಸರಾ’ ಕಾರ್ಯಕ್ರಮದಲ್ಲಿ ಆಕರ್ಷಕ ಇಡ್ಲಿ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆಗಳು ಸಾರ್ವಜನಿಕರ ಗಮನ ಸೆಳೆದವು. ನಗರದ ಶಿವಪ್ಪ ನಾಯಕ ವೃತ್ತದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಯುವಕ-ಯುವತಿಯರು ಸೇರಿದಂತೆ ಸಾರ್ವಜನಿಕರು ಹಾಗೂ ಸಂಚಾರಿ ಪೊಲೀಸರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ಕೇವಲ 2 ನಿಮಿಷಗಳ ಕಾಲಾವಕಾಶದಲ್ಲಿ ಯಾರು ಗರಿಷ್ಠ ಸಂಖ್ಯೆಯ ಇಡ್ಲಿ ಹಾಗೂ ಬಾಳೆಹಣ್ಣುಗಳನ್ನು ತಿನ್ನುತ್ತಾರೋ ಅವರಿಗೆ ಬಹುಮಾನ ನೀಡುವ ಕಠಿಣ ನಿಯಮವನ್ನು ವಿಧಿಸಲಾಗಿತ್ತು. ಸಾರ್ವಜನಿಕರು ಹಾಗೂ ಸಂಚಾರಿ ಪೊಲೀಸ್ ವಿಭಾಗಗಳೆರಡರಲ್ಲೂ ಸೇರಿ 30ಕ್ಕೂ ಹೆಚ್ಚು ಉತ್ಸಾಹಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮುಗಿಬಿದ್ದರು. ಸಂಚಾರಿ ಪೊಲೀಸ್ ಸಿಬ್ಬಂದಿ ಪ್ರವೀಣ್ ಪಾಟೀಲ್ ಅವರು ಕೇವಲ 2 ನಿಮಿಷಗಳಲ್ಲಿ ಬಾರೀ ವೇಗವಾಗಿ 12 ಇಡ್ಲಿಗಳನ್ನು ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದು ಸೈ ಎನಿಸಿಕೊಂಡರು. ಸಾರ್ವಜನಿಕರ ವಿಭಾಗದಲ್ಲಿ ಕೇವಲ 2 ನಿಮಿಷದಲ್ಲಿ 11 ಮುಕ್ಕಾಲು (11.75) ಇಡ್ಲಿಗಳನ್ನು ತಿಂದ ಮಿಥುನ್ ಪ್ರಥಮ ಸ್ಥಾನಕ್ಕೆ ಭಾಜನರಾದರು. ಮಹಿಳಾ ವಿಭಾಗದ ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಎಚ್.ಸಿ. ರಾಧಾ ಅವರು ನಿಗದಿತ ಸಮಯದಲ್ಲಿ 7 ವರೆ ಬಾಳೆಹಣ್ಣುಗಳನ್ನು ತಿಂದು ಪ್ರಥಮ ಸ್ಥಾನ ಗಳಿಸಿದರು. ದಸರಾ ಮಹೋತ್ಸವದ ಭಾಗವಾಗಿ ನಡೆದ ಈ ವಿಶಿಷ್ಟ ಆಹಾರ ಸ್ಪರ್ಧೆಯು ಸ್ಥಳೀಯರಿಗೆ ಹಾಗೂ ನೂರಾರು ಪ್ರೇಕ್ಷಕರಿಗೆ ಅಪಾರ ಮನರಂಜನೆ ನೀಡಿತು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
