ಎನ್ ಎಸ್ ಯು ಐ ಸದಸ್ಯರು ಸಚಿವ ನಾಗೇಶ ಮನೆ ಆವರಣ ಪ್ರವೇಶಿಸಿದ್ದನ್ನು ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಾರೆ!

ಎನ್ ಎಸ್ ಯು ಐ ಸದಸ್ಯರು ಸಚಿವ ನಾಗೇಶ ಮನೆ ಆವರಣ ಪ್ರವೇಶಿಸಿದ್ದನ್ನು ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಾರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 03, 2022 | 6:20 PM

ಆದರೆ ಸಚಿವರ, ಶಾಸಕರ ಮನೆಗಳ ಮುಂದೆ ನಡೆಸುವ ಪ್ರತಿಭಟನೆ ಶಾಂತಿಯುತವಾಗಿರಬೇಕು. ಮನೆಯ ಗೇಟ್ ತೆರೆದಿತ್ತು, ಹಾಗಾಗಿ ಒಳಗೆ ನುಗ್ಗಿದ್ದಾರೆ ಅನ್ನೋದು ಸಮರ್ಥನೀಯವಲ್ಲ. ಮನೆಗಳಲ್ಲಿ ಮಹಿಳೆಯರು-ಮಕ್ಕಳು ಇರುತ್ತಾರೆ, ವಯಸ್ಸಾದ ತಂದೆ ತಾಯಿಗಳಿರುತ್ತಾರೆ, ಅನಾರೋಗ್ಯದಿಂದ ಬಳಲುವ ಜನ ಇರುತ್ತಾರೆ.

Bengaluru: ನಮ್ಮ ನಾಯಕರು ಅಧಿಕಾರದಲ್ಲಿರುವಾಗ ಒಂದು ಮಾತು ಇಲ್ಲದಿರುವಾಗ ಮತ್ತೊಂದು ಮಾತು ಆಡುವುದು ಅವರಿಗೆ ತಟ್ಟೆಯಲ್ಲಿ ಬಡಿಸಿದ ಅನ್ನ ತಿನ್ನುವಷ್ಟೇ ಸುಲಭ. ಹಾಗೆಯೇ ತಾವು ಮಾಡಿದ್ದು ಸರಿ ಬೇರೆಯರವರು ಮಾಡಿದ್ದು ತಪ್ಪು ಅಂತ ಹೇಳುವ ಧೋರಣೆಯನ್ನೂ ಅವರಲ್ಲಿ ನಿಚ್ಚಳವಾಗಿ ಕಾಣುತ್ತದೆ. ಈ ಧೋರಣೆ ಒಂದು ಪಕ್ಷದ ನಾಯಕರಿಗೆ ಸೀಮಿತವಾದುದಲ್ಲ. ಪಕ್ಷಾತೀತವಾಗಿ ಅವರು ಹಾಗೆ ಮಾಡುತ್ತಾರೆ. ಇದನ್ನು ಯಾಕೆ ಹೇಳಬೇಕಾಗಿದೆ ಎಂದರೆ ಪಠ್ಯ ಪುಸ್ತಕಗಳ ಪರಿಷ್ಕರಣೆ ವಿಷಯದಲ್ಲಿ ವ್ಯಾಪಕವಾಗಿ ಖಂಡನೆಗೊಳಗಾಗುತ್ತಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಅವರ ತಿಪಟೂರಿನ ಮನೆಗೆ ಭಾರತೀಯ ವಿದ್ಯಾರ್ಥಿಗಳ ರಾಷ್ಟ್ರೀಯ ಒಕ್ಕೂಟದ (ಎನ್ ಎಸ್ ಯು ಐ) (NSUI) ಸದಸ್ಯರು ಮುತ್ತಿಗೆ ಹಾಕಿ ಆವರಣ ಪ್ರವೇಶಿದ್ದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯೊಂದರಲ್ಲಿ ಸಿದ್ದರಾಮಯ್ಯನವರು ಹೇಳುವ ಹಾಗೆ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುವುದು ಎಲ್ಲರ ಸಾಂವೈಧಾನಿಕ ಹಕ್ಕಾಗಿದೆ ಎಂದರು. ಅದು ನಿಜ ಮತ್ತು ಎನ ಎಸ್ ಯು ಐ ಪ್ರತಿಭಟನೆ ನಡೆಸುವುದು ತಪ್ಪಲ್ಲ. ಆದರೆ ಸಚಿವರ, ಶಾಸಕರ ಮನೆಗಳ ಮುಂದೆ ನಡೆಸುವ ಪ್ರತಿಭಟನೆ ಶಾಂತಿಯುತವಾಗಿರಬೇಕು. ಮನೆಯ ಗೇಟ್ ತೆರೆದಿತ್ತು, ಹಾಗಾಗಿ ಒಳಗೆ ನುಗ್ಗಿದ್ದಾರೆ ಅನ್ನೋದು ಸಮರ್ಥನೀಯವಲ್ಲ. ಮನೆಗಳಲ್ಲಿ ಮಹಿಳೆಯರು-ಮಕ್ಕಳು ಇರುತ್ತಾರೆ, ವಯಸ್ಸಾದ ತಂದೆ ತಾಯಿಗಳಿರುತ್ತಾರೆ, ಅನಾರೋಗ್ಯದಿಂದ ಬಳಲುವ ಜನ ಇರುತ್ತಾರೆ.

ಪ್ರತಿಭಟನೆ ನಡೆಸುವವರು ಮನೆ ಆವರಣ ನುಗ್ಗಿದಾಗ ಒಳಗೆ ಸಚಿವರೊಬ್ಬರೇ ಇರಲಾರರು. ಅವರ ಕುಟುಂಬದ ಇತರ ಸದಸ್ಯರೂ ಇರುತ್ತಾರೆ. ಅವರು ಹೆದರಿ ಏನಾದರೂ ಅನಾಹುತವಾದರೆ ಅದಕ್ಕೆ ಯಾರು ಹೊಣೆ? ಇತ್ತೀಚಿಗೆ ಕರ್ನಾಟಕದ ಬಿಜೆಪಿ ಸಂಸದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ ಕಾರ್ಯಕರ್ತರು ‘ದಿ ಕಾಶ್ಮೀರಿ ಪೈಲ್ಸ್’ ಚಿತ್ರದ ಬಗ್ಗೆ ಟೀಕೆ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆ ಆವರಣ ನುಗ್ಗಿ ಗಲಾಟೆ ಮಾಡಿದಾಗ ಮನೆಯಲ್ಲಿ ಕೇಜ್ರಿವಾಲ್ ಮಕ್ಕಳು ಮತ್ತು ವೃದ್ಧ ತಂದೆ ತಾಯಿಗಳು ಮಾತ್ರ ಇದ್ದರು. ಸಂಸದರನ್ನು ಸಿದ್ದರಾಮಯ್ಯ ಸೇರಿದಂತೆ ಅನೇಕರ ಖಂಡಿಸಿದ್ದರು.

ಬಿಜೆಪಿ ಕಾರ್ಯಕರ್ತರು ಮಾಡಿದ್ದು ತಪ್ಪು ಅಂತ ಹೇಳುವ ಸಿದ್ದರಾಮಯ್ಯ ಎನ್ ಎಸ್ ಯು ಐ ಮಾಡಿದ್ದೂ ಕೂಡ ತಪ್ಪು ಅನ್ನದೆ ಸಮರ್ಥಿಸಿಕೊಂಡರೆ ಹೇಗೆ ಸ್ವಾಮೀ?

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.