ಹಿಜಾಬ್ ವಿವಾದ: ಅದು ಹಾಗಲ್ಲ ಅಂತ ರಾಗ ಎಳೆಯುತ್ತಾ ನಿನ್ನೆ ಹೇಳಿದ್ದನ್ನೇ ಯಾಮಾರಿಸಿಬಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
ಉನ್ನತ ಸ್ಥಾನ, ಹುದ್ದೆಗಳಲ್ಲಿರುವವರು ಮಾತಾಡುವಾಗ ಭಾವೋದ್ರೇಕಕ್ಕೆ ಒಳಗಾದರೆ ಇಂಥ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇದು ಕೇವಲ ಸಿದ್ದರಾಮಯ್ಯ ಒಬ್ಬರ ಕತೆಯಲ್ಲ. ರಾಜಕಾರಣಿಗಳು, ನಮ್ಮನ್ನಾಳುವ ನಾಯಕರ ಸ್ವಭಾವವೇ ಹಾಗೆ. ವೀರಾವೇಶದಲ್ಲಿ ಏನೋ ಹೇಳಿ ಚಪ್ಪಾಳೆ ಗಿಟ್ಟಿಸುತ್ತಾರೆ ಆದರೆ ವಾಸ್ತವ ಎದುರುದಾಗ ಪೇಚಿಗೆ ಸಿಕ್ಕಿಕೊಳ್ಳುತ್ತಾರೆ. ಸಿದ್ದರಾಮಯ್ಯರಂಥ ಅನುಭವಿ ರಾಜಕಾರಣಿಗೆ ಇಂಥ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದ್ದು ವಿಷಾದಕರ.
ಮೈಸೂರು: ವಿರೋಧ ಪಕ್ಷದ ನಾಯಕರ ಟೀಕೆಗಳಿಗೆ ಸಿದ್ದರಾಮಯ್ಯ ಹಿಂದೇಟು ಹಾಕಿದರೆ ಅಥವಾ ಹಿಜಾಬ್ ವಿಚಾರ ಇನ್ನೂ ನ್ಯಾಯಾಲಯದ ಮುಂದಿದೆ ಎಂಬ ವಿಚಾರ ಅವರಿಗೆ ಗೊತ್ತಿರಲಿಲ್ಲವೇ? ಸಾಮಾನ್ಯವಾಗಿ ರಾಜಕಾರಣಿಗಳು, ಜನರಿಂದ ಚಪ್ಪಾಳೆ ಶಿಳ್ಳೆ ಗಿಟ್ಟಿಸಲು ಇಲ್ಲವೇ ಸಮುದಾಯಗಳನ್ನು ಓಲೈಸಲು ಅತಿರೇಕ, ಅಸಂಭವನೀಯ ಮತ್ತು ಅತಾರ್ಕಿಕ ಮಾತುಗಳನ್ನಾಡಿಬಿಡುತ್ತಾರೆ. ನಿನ್ನೆ ನಗರದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡುವಾಗ ಸಿದ್ದರಾಮಯ್ಯ ಇಂಥ ಅಗ್ಗದ ಆಮಿಶಕ್ಕೆ ಒಳಗಾದರೆ? ಹಿಜಾಬ್ ನಿಷೇಧ ವಾಪಸ್ಸು ಪಡೆಯುವಂತೆ ಸಂಬಂಧಪಟ್ಟ ಇಲಾಖೆಗೆ ಹೇಳಿದ್ದೇನೆ ಅಂತ ಅವರು ಹೇಳಿದ್ದನ್ನು ಇಡೀ ಕರ್ನಾಟಕ ಕೇಳಿಸಿಕೊಂಡಿದೆ. ತಮ್ಮ ಮಾತಿಗೆ ಪೂರಕವಾದ ಕೆಲ ಮಾತುಗಳನ್ನೂ ಅವರು ಆಡಿದರು. ಆದರೆ ಮುಖ್ಯಮಂತ್ರಿಯವರ ಇವತ್ತಿನ ಧೋರಣೆ ನೋಡಿ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಿಜಾಬ್ ಬಗ್ಗೆ ಅವರಾಡಿದ ಮಾತಿಗೆ ಸಂಬಂಧಪಟ್ಟಂತೆ ಪ್ರಶ್ನೆ ಕೇಳಿದಾಗ ಹಾಗಲ್ಲ ಅಂತ ರಾಗ ಎಳೆಯುತ್ತಾ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದೆ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ