ಶಿವಕುಮಾರ್ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ಹಿಂಪಡೆದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ: ಎಂಪಿ ರೇಣುಕಾಚಾರ್ಯ
ಮೊನ್ನೆಯವರೆಗೆ ತಮ್ಮ ಪಕ್ಷದ ನಾಯಕರನ್ನೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ರೇಣುಕಾಚಾರ್ಯ ಬಹಿರಂಗವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು. ಅವರು ಯಡಿಯೂರಪ್ಪರ ಕಟ್ಟಾ ಬೆಂಬಲಿಗ ಅಂತ ಎಲ್ಲರಿಗೂ ಗೊತ್ತು. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದಕ್ಕೆ ಖುಷಿಯಾಗಿ ನಿಮುವು ಬದಲಿಸಿದರೇ?
ದಾವಣಗೆರೆ: ಬಿವೈ ವಿಜಯೇಂದ್ರ (BY Vijayendra) ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿದ ನಂತರ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ವರಸೆ ಬದಲಾದಂತಿದೆ ಮಾರಾಯ್ರೇ. ಇಂದು ಸ್ವಕ್ಷೇತ್ರ ಹೊನ್ನಾಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಡಿಕೆ ಶಿವಕುಮಾರ್ (DK Shivakumar) ಅಕ್ರಮ ಗಳಿಕೆ ಪ್ರಕರಣದಲ್ಲಿ ಸಿಬಿಐಗೆ ನೀಡಿದ್ದ ತನಿಖಾ ಆದೇಶವನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ಸು ಪಡೆದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡಿದೆ ಎಂದು ಹೇಳಿದರು. ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಆರೋಪಗಳನ್ನು ಆಧರಿಸಿಯೇ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಸಿಬಿಐ ತನಿಖೆಗೆ ಆದೇಶ ನೀಡಿದ್ದರು. ತನಿಖೆಯನ್ನು ಹೆಚ್ಚುಕಡಿಮೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸುವ ಹಂತದಲ್ಲಿ ಅದನ್ನು ನಿಲ್ಲಿಸುವಂತೆ ಆದೇಶ ನೀಡಿದ್ದ್ದು ಅಕ್ಷಮ್ಯ ಆಪರಾಧವಾಗಿದೆ ಎಂದು ರೇಣುಕಾಚಾರ್ಯ ಹೇಳಿದರು. ಈಗ ಅಡ್ವೋಕೇಟ್ ಜನರಲ್ ಆಗಿರುವ ಕೆ ಶಶಿಕಿರಣ್ ಶೆಟ್ಟಿ ಮೊದಲಿಗೆ ಶಿವಕುಮಾರ್ ವಕೀಲ ಆಗಿದ್ದರು. ಅವರು ನೀಡಿರುವ ವರದಿಯ ಆಧಾರದಲ್ಲಿ ಸರ್ಕಾರ ತನಿಖೆಯ ಆದೇಶವನ್ನು ಹಿಂಪಡೆದಿದೆ ಎಂದ ಅವರು ಸರ್ಕಾರ ತನ್ನ ನಿಲುವನ್ನು ಬದಲಿಸದಿದ್ದರೆ, ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ