ನಮ್ಮಪ್ಪನ ಮೇಲೆ ಪ್ರಮಾಣ ಮಾಡು ಅಂತ ಹೇಳಲು ಸಿದ್ದರಾಮಯ್ಯ ಯಾರು? ಹೆಚ್ ಡಿ ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 20, 2022 | 10:54 PM

ಉಂಡ ಮನೆಗೆ ಎರಡು ಬಗೆದ ವ್ಯಕ್ತಿ ಸಿದ್ದರಾಮಯ್ಯ, ನಮ್ಮ ಪಕ್ಷದಿಂದ ಬೆಳೆದು ಕೊನೆಗೆ ಆದರ ಬೆನ್ನಲ್ಲೇ ಚೂರಿ ಇರಿದು ಕಾಂಗ್ರೆಸ್ ಸೇರಿದವರು. ಈಗ ಪ್ರತಿದಿನ ಜೆಡಿ(ಎಸ್) ಮುಗಿಸಬೇಕು ಅನ್ನುತ್ತಿರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಹಾಸನ:  ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಬುಧವಾರ ಹಾಸನದಲ್ಲಿ ಕಾಂಗ್ರೆಸ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ (Siddaramaia) ವಿರುದ್ಧ ಅಕ್ಷರಶಃ ಬೆಂಕಿಯುಗುಳಿದರು. ಮಂಗಳವಾರ ಸಿದ್ದರಾಮಯ್ಯನವರು ಹೆಚ್ ಡಿ ಕೆಯವರನ್ನು ಟೀಕಿಸಿ ಮಾಡಿದ ಸರಣಿ ಟ್ವೀಟ್ ಗೆ ಪ್ರತಿಯಾಗಿ ಜೆಡಿ(ಎಸ್) ನಾಯಕ ಬಹಳ ಕಟುವಾಗಿ ಟೀಕಿಸಿದ್ದಾರೆ. ಬಿಜೆಪಿ ಜೊತೆ 20:20 ಆಧಾರದಲ್ಲಿ ಸರ್ಕಾರ ರಚಿಸಿದಾಗ 20 ತಿಂಗಳ ಬಳಿಕ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಿರುವುದಕ್ಕೆ ಬಿಜೆಪಿಯೇ ಕಾರಣ, ಸಹಿ ಮಾಡದ ಕರಾರು ಪತ್ರ ತಂದು ಅವರು ಅವಕಾಶವನ್ನು ಹಾಳುಮಾಡಿಕೊಂಡರು. ಅಷ್ಟಕ್ಕೂ, ಮೊದಲ 9 ದಿನಗಳ ಕಾಲ ಯಡಿಯೂರಪ್ಪನವರೇ (BS Yediyurappa) ಮುಖ್ಯಮಂತ್ರಿಗಳಾಗಿದ್ದರು, ಇದರಲ್ಲಿ ನನ್ನ ವಚನ ಭ್ರಷ್ಟತೆ ಎಲ್ಲಿಂದ ಬಂತು? ಸಿದ್ದರಾಮಯ್ಯ ಈ ವಿಷಯವನ್ನು ಪದೇಪದೆ ಹೇಳುವುದರಲ್ಲಿ ಅರ್ಥವಿಲ್ಲ, ಎಂದು ಕುಮಾರಸ್ವಾಮಿ ಹೇಳಿದರು.

ಉಂಡ ಮನೆಗೆ ಎರಡು ಬಗೆದ ವ್ಯಕ್ತಿ ಸಿದ್ದರಾಮಯ್ಯ, ನಮ್ಮ ಪಕ್ಷದಿಂದ ಬೆಳೆದು ಕೊನೆಗೆ ಆದರ ಬೆನ್ನಲ್ಲೇ ಚೂರಿ ಇರಿದು ಕಾಂಗ್ರೆಸ್ ಸೇರಿದವರು. ಈಗ ಪ್ರತಿದಿನ ಜೆಡಿ(ಎಸ್) ಮುಗಿಸಬೇಕು ಅನ್ನುತ್ತಿರುತ್ತಾರೆ ಎಂದು ಹೇಳುವ ಕುಮಾರಸ್ವಾಮಿ, ನನ್ನ ತಂದೆ ಮೇಲೆ ಆಣೆ ಪ್ರಮಾಣ ಅಂತ ಹೇಳೋದಿಕ್ಕೆ ಯಾರಯ್ಯ ನೀನು ಎಂದು ಏಕವಚನದಲ್ಲಿ ಸಂಬೋಧಿಸುತ್ತಾರೆ. ಇಂಥವರನ್ನು ಮೆಚ್ಚಿಸಲು ನಾನು ರಾಜಕಾರಣದಲ್ಲಿಲ್ಲ, ಆರೂವರೆ ಕನ್ನಡಿಗರನ್ನು ಮೆಚ್ಚಿಸಲು ರಾಜಕಾರಣ ಮಾಡುತ್ತಿದ್ದೇನೆ ಎಂದು ಹೇಳಿ ಸಿದ್ದರಾಮಯ್ಯನಿಂದ ನೀತಿ ಪಾಠ ಕಲಿಯುವ ಅವಶ್ಯಕತೆ ನನಗಿಲ್ಲ ಎಂದರು.

ತಮ್ಮ ಪಕ್ಷ ಮತ್ತು ದೇವೇಗೌಡರ ಹೆಸರು ತೆಗೆದುಕೊಂಡು ಇವರು ಇನ್ನೆಷ್ಟು ದಿನ ರಾಜಕಾರಣ ಮಾಡುತ್ತಾರೆ. ಬೆಳಗಿದರೆ ಸಾಕು ನಮ್ಮನ್ನು ಬಿಜೆಪಿಯ ಬಿ ಟೀಮ್ ಅನ್ನುತ್ತಾರೆ. ಹಿಜಾಬ್ ವಿವಾದ ನಡೆದಾಗ ಕಾಂಗ್ರೆಸ್ ಕೋಮಾದಲ್ಲಿತ್ತು. ಈ ಪಕ್ಷದ್ದು ಹಿಡನ್ ಅಜೆಂಡಾ ಸಾಫ್ಟ್ ಹಿಂದೂತ್ವ ಅಂತ ಯಾರಿಗೆ ಗೊತ್ತಿಲ್ಲ? ಎಂದು ಕುಮಾರಸ್ವಾಮಿ ಹೇಳಿದರು.

ನಮ್ಮ ಪಕ್ಷದ ಬಗ್ಗೆ ಇವರು ಯಾಕೆ ಮಾತಾಡುತ್ತಾರೆ? ಕಾಂಗ್ರೆಸ್ ಕೊಳೆತು ನಾರುತ್ತಿದೆ, ಮೊದಲು ತಮ್ಮದನ್ನು ಸರಿಪಡಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:   ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ, ಆದರೆ ಮುಗ್ಧರಿಗೆ ತೊಂದರೆ ಕೊಡುವುದು ಬೇಡ; ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್