ಹಿಂದೂ ಯುವಕನೊಬ್ಬನ ಕೊಲೆಯಾದರೆ ಸಿದ್ದರಾಮಯ್ಯನವರ ಬಾಯಲ್ಲಿ ಒಂದು ಸಂತಾಪದ ಮಾತು ಕೂಡ ಬರಲ್ಲ: ಸಿಟಿ ರವಿ
ಮಾಧ್ಯಮಗಳು ಪುನಃ ಚಂದ್ರು ಕೊಲೆ ಪ್ರಸ್ತಾಪ ಮಾಡಿದಾಗ, ರವಿ ಅವರು ಮೊದಲು ತಾನು ಏನು ಹೇಳಿದ್ದೆ ಅನ್ನೋದನ್ನು ನೆನಪಸಿಕೊಳ್ಳಲು ಪ್ರಯತ್ನಿಸುತ್ತಾರೆ. ಮಾತುಗಳು ಅವರ ಬಾಯಿಂದ ಸರಾಗವಾಗಿ ಹೊರಬೀಳುವುದಿಲ್ಲ, ತಡವರಿಸುತ್ತಾರೆ.
ಬೆಂಗಳೂರಿನ ಜೈಮಾರುತಿ ನಗರದ ಯುವಕ ಚಂದ್ರು (Chandru) ಹತ್ಯೆ ರಾಜಕೀಯ ಬಣ್ಣ ಪಡೆದುಕೊಂಡು ಬಿಟ್ಟಿದೆ ಮಾರಾಯ್ರೇ. ಸೋಮವಾರ ತಡರಾತ್ರಿ ಕೊಲೆಯಾದ ಚಂದ್ರು ಮತ್ತು ಕೊಲೆ ಅರೋಪಿ ಶಾಹಿದ್ (Shahid) ಬೈಕ್ಗಳು ಜೆ ಜೆ ನಗರದ ಗೋರಿಪಾಳ್ಯದಲ್ಲಿ ಢಿಕ್ಕಿ ಹೊಡೆದ ಬಳಿಕ ಜಗಳ ತಲೆದೋರಿ ಚಂದ್ರುನನ್ನು ಶಾಹಿದ್ ಚೂರಿಯಿಂದ ಇರಿದು ಕೊಂದಿದ್ದಾನೆಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ. ಆದರೆ, ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಪೊಲೀಸರು ನೀಡಿರುವ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚಂದ್ರುಗೆ ಅರೋಪಿ ಉರ್ದುನಲ್ಲಿ ಮಾತಾಡಲು ಹೇಳಿದನಂತೆ, ಅವನು ಬರಲ್ಲ ಅಂದಿದ್ದಕ್ಕೆ ಶಾಹಿದ್ ಕೊಲೆ ಮಾಡಿದನಂತೆ ಎಂದು ರವಿ ಮತ್ತು ಜ್ಞಾನೇಂದ್ರ ಹೇಳುತ್ತಿದ್ದಾರೆ.
ಈ ವಿಡಿಯೋನಲ್ಲಿ ರವಿ ಅವರು ಹೇಳುವುದನ್ನು ನೀವೇ ಕೇಳಿಸಿಕೊಳ್ಳಿ. ಉರ್ದುನಲ್ಲಿ ಮಾತಾಡದೆ ಹೋಗಿದ್ದಕ್ಕೆ ಚಂದ್ರುನನ್ನು ಕೊಲ್ಲಲಾಗಿದೆ, ಆ ಸಿಸಿಟಿವಿ ಫುಟೇಜ್ ನಾನು ಕಣ್ಣಾರೆ ನೋಡಿದ್ದೇನೆ. ನಾವು ಯಾವ ದೇಶದಲ್ಲಿ ಇದ್ದೇವೆ, ನಿನ್ನೆ ಜೆಜೆ ನಗರದಲ್ಲಿ ನಡೆದಿದ್ದು ಬೇರೆ ಜಾಗದಲ್ಲೂ ನಡೆಯಬಹುದು. ಒಬ್ಬ ಹಿಂದೂ ಯುವಕನ ಕೊಲೆಯಾದರೆ ರಾಜ್ಯದ ಬುದ್ಧಿಜೀವಿಗಳ ಕಣ್ಣಲ್ಲಿ ಒಂದು ಹನಿ ನೀರು ಸಹ ಬರೋದಿಲ್ಲ. ಸಿದ್ದರಾಮಯ್ಯ ಅವರಿಂದ ಒಂದು ಸಂತಾಪ ಸೂಚಕ ಮಾತು ಬರೋದಿಲ್ಲ, ಅವರ ಆಷಾಡಭೂತಿತನಕ್ಕೆ ನನ್ನ ಧಿಕ್ಕಾರ ಎಂದು ರವಿ ಆಕ್ರೋಶದಲ್ಲಿ ಹೇಳುತ್ತಾರೆ. ಸತ್ತವನು ಮುಸಲ್ಮಾನ ಆಗಿದ್ದರೆ ಮಾಧ್ಯಮದವರೇ ಊರೆಲ್ಲಾ ಡಂಗುರ ಸಾರುತ್ತಿದ್ದರು ಅಂತ ರವಿ ಕೋಪ ಉಗುಳುತ್ತಾರೆ.
ಬಿಜೆಪಿ ಒಂದು ಸ್ವತಂತ್ರ ಸಂಘಟನೆಯಾಗಿದೆ, ಅದು ಆರ್ ಎಸ್ ಎಸ್ ನಿಯಂತ್ರಣದಲ್ಲಿಲ್ಲ. ಆರ್ ಎಸ್ ಎಸ್ ನಿಂದ ನಾವು ರಾಷ್ಟ್ರಭಕ್ತಿಯ ಪ್ರೇರೇಪಣೆ ಪಡೆದಿದ್ದೇವೆ. ನಮ್ಮದು ವಂಶಪಾರ್ಯಂಪರ ಹಿನ್ನೆಲೆ ಹೊಂದಿರುವ ಪಕ್ಷವಲ್ಲ, ನಮ್ಮಲ್ಲಿ ಪ್ರಜಾತಾಂತ್ರಿಕ ತಳಹದಿಯ ಮೇಲೆ ಚುನಾವಣೆ ನಡೆಯುತ್ತವೆ ಮತ್ತು ಪಕ್ಷದ ಅಧ್ಯಕ್ಷರು ಕಾಲಕಾಲಕ್ಕೆ ಬದಲಾಗುತ್ತಿರುತ್ತಾರೆ ಎಂದು ರವಿ ಹೇಳಿದರು.
ಮಾಧ್ಯಮಗಳು ಪುನಃ ಚಂದ್ರು ಕೊಲೆ ಪ್ರಸ್ತಾಪ ಮಾಡಿದಾಗ, ರವಿ ಅವರು ಮೊದಲು ತಾನು ಏನು ಹೇಳಿದ್ದೆ ಅನ್ನೋದನ್ನು ನೆನಪಸಿಕೊಳ್ಳಲು ಪ್ರಯತ್ನಿಸುತ್ತಾರೆ. ಮಾತುಗಳು ಅವರ ಬಾಯಿಂದ ಸರಾಗವಾಗಿ ಹೊರಬೀಳುವುದಿಲ್ಲ, ತಡವರಿಸುತ್ತಾರೆ. ಚಂದ್ರು ಬಗ್ಗೆ ತನಗೆಲ್ಲ ಗೊತ್ತು ಅನ್ನುವ ಹಾಗೆ ಅವನಿಗೆ ಶತ್ರುಗಳೇ ಇರಲಿಲ್ಲ, ಯಾರೊಂದಿಗೂ ದ್ವೇಷವಿರಲಿಲ್ಲ ಎನ್ನುತ್ತಾರೆ.
ಇದನ್ನೂ ಓದಿ: ಉರ್ದು ಮಾತಾಡದ್ದಕ್ಕೆ ಕೊಲೆ ಎಂಬ ಹೇಳಿಕೆ ತಪ್ಪಾಗಿದೆ; ಇದೀಗ ಪೊಲೀಸರು ವಿಸ್ತೃತ ವರದಿ ನೀಡಿದ್ದಾರೆ ಎಂದ ಆರಗ ಜ್ಞಾನೇಂದ್ರ