ಎಸ್‌ಐಆರ್ ಕರ್ತವ್ಯಕ್ಕೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳು-ಪೋಷಕರ ಪ್ರತಿಭಟನೆ
ಬೆಂಗಳೂರಿನ ಶಾಲೆಗಳ ಶಿಕ್ಷಕರನ್ನು ಎಸ್ಐಆರ್ ಪ್ರಕ್ರಿಯೆಗೆ ನಿಯೋಜಿಸಿರುವ ಕಾರಣ ತರಗತಿಗಳು ನಡೆಯುತ್ತಿಲ್ಲ. ಮಾಗಡಿ ರಸ್ತೆಯ ಗುರುಕುಲ್ ಇಂಟರ್ನ್ಯಾಷನಲ್ ಶಾಲೆಯ ಮುಂಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಕರು ಎಸ್ಐಆರ್ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಪಾಠ ಪ್ರವಚನಗಳಿಗೆ ಅಡ್ಡಿಯಾಗಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜುಲೈ 18: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗೆ ಶಿಕ್ಷಕರನ್ನು ನಿಯೋಜಿಸಿರುವ ಪರಿಣಾಮ ಶಾಲಾ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಗುರುಕುಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 7 ಶಿಕ್ಷಕರ ಪೈಕಿ 6 ಮಂದಿಯನ್ನು ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ 8, 9 ಮತ್ತು 10ನೇ ತರಗತಿಗಳಿಗೆ ಒಬ್ಬ ಶಿಕ್ಷಕರೇ ಎಲ್ಲಾ ವಿಷಯಗಳನ್ನು ಬೋಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 1ರಿಂದ 7ನೇ ತರಗತಿಗಳಿಗೂ ಸೀಮಿತ ಶಿಕ್ಷಕರಿಂದಲೇ ಪಾಠ ನಡೆಯುತ್ತಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಆರೋಪಿಸಿ ಶಾಲೆಯ ಎದುರು ಪ್ರತಿಭಟನೆ ನಡೆಸಿದ ಅವರು, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆಯಾಗದಂತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
