ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ

Edited By:

Updated on: Dec 31, 2025 | 9:29 AM

ಚಿತ್ರದುರ್ಗ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಆನೇಕಲ್​​ನಲ್ಲಿ ಎರಡು ಸ್ಲೀಪರ್ ಕೋಚ್ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಚಂದಾಪುರ ಫ್ಲೈಓವರ್ ಮೇಲೆ ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಲೀಪರ್ ಕೋಚ್ ಬಸ್‌ಗಳು ಡಿಕ್ಕಿಯಾಗಿದ್ದು ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್, ಭಾರಿ ಸಾವು-ನೋವು ಉಂಟಾಗಿಲ್ಲ.

ಆನೇಕಲ್, ಡಿಸೆಂಬರ್ 31: ಆನೇಕಲ್ ತಾಲೂಕಿನ ಚಂದಾಪುರ ಫ್ಲೈಓವರ್ ಮೇಲೆ ಎರಡು ಸ್ಲೀಪರ್ ಕೋಚ್ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಚೆನ್ನೈ ಕಡೆಗೆ ಹೊರಟಿದ್ದ ಎರಡು ಸ್ಲೀಪರ್ ಬಸ್‌ಗಳು ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಂದಾಪುರದ ಬಳಿ ಡಿಕ್ಕಿ ಹೊಡೆದಿವೆ. ಮುಂಬದಿ ಸಾಗುತ್ತಿದ್ದ ಸ್ಲೀಪರ್ ಬಸ್‌ಗೆ ಹಿಂಬದಿಯಿಂದ ಮತ್ತೊಂದು ಸ್ಲೀಪರ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅತಿವೇಗದ ಚಾಲನೆಯಿಂದ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಅಪಘಾತದಲ್ಲಿ ಎರಡೂ ಬಸ್‌ಗಳು ತೀವ್ರವಾಗಿ ಜಖಂಗೊಂಡಿವೆ.

ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಪರಿಣಾಮ ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ