ಅಕ್ರಮವಾಗಿ ಹೆಣ್ಣು ಮಗು ದತ್ತು ಪಡೆದ ಆರೋಪಕ್ಕೆ ಸೋನು ಗೌಡ ಮೊದಲ ಪ್ರತಿಕ್ರಿಯೆ
ಕಾನೂನುಬಾಹಿರವಾಗಿ ಬಾಲಕಿಯನ್ನು ದತ್ತು ಪಡೆದಕೊಂಡ ಆರೋಪ ಸೋನು ಶ್ರೀನಿವಾಸ್ ಗೌಡ ಅವರ ಮೇಲಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಸೋನು ಗೌಡ ಅವರು ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ‘ನಾನು ಆ ಹುಡುಗಿಯನ್ನು ರಕ್ಷಣೆ ಮಾಡೋಕೆ ಅಂತ ಕರೆದುಕೊಂಡು ಬಂದಿದ್ದು’ ಎಂದು ಅವರು ಹೇಳಿದ್ದಾರೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.
ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕಾನೂನುಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪದಲ್ಲಿ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸೋನು ಗೌಡ (Sonu Gowda) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ವಾಹನದಲ್ಲಿ ತೆರಳುವುದಕ್ಕೂ ಮುನ್ನ ಮಾಧ್ಯಮಗಳ ಎದುರು ಸೋನು ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ. ‘ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಏನೂ ತೊಂದರೆ ಇಲ್ಲ. ಒಂದು ಹುಡುಗಿಯನ್ನು ರಕ್ಷಣೆ ಮಾಡೋಕೆ ಅಂತ ನಾನು ಕರೆದುಕೊಂಡ ಬಂದಿದ್ದು. ಅವಳು ಈಗಲೂ ಆರಾಮಾಗಿ, ಸುರಕ್ಷಿತವಾಗಿ ಇದ್ದಾಳೆ’ ಎಂದು ಸೋನು ಗೌಡ ಹೇಳಿದ್ದಾರೆ. ಕೇಸ್ಗೆ (Sonu Gowda Case) ಸಂಬಂಧಪಟ್ಟಂತೆ ಅವರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ಪೊಲೀಸರು ತನಿಖೆ ಮಾಡಲಿದ್ದಾರೆ. ಮಾರ್ಚ್ 25ರಂದು ಅವರನ್ನು ಕೋರ್ಟ್ಗೆ ಹಾಜರುಪಡಿಸಬೇಕಿದೆ. ರೀಲ್ಸ್ ಮಾಡುವ ಮೂಲಕ ಸೋನು ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ನಿಯಮ ಪಾಲಿಸದೇ ಮಗು ದತ್ತು ಪಡೆದ ಆರೋಪದಲ್ಲಿ ಅವರು ಈಗ ಕಾನೂನಿನ ಸಂಕಷ್ಟ ಎದುರಿಸುವಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.