Team India: ಟೀಮ್ ಇಂಡಿಯಾದ ಚಾಂಪಿಯನ್ಸ್ ಜೆರ್ಸಿ ಅನಾವರಣ
T20 World Cup 2024: 2007 ರಲ್ಲಿ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ ಇದೀಗ 17 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಭಾರತಕ್ಕೆ ಆಗಮಿಸಿದ ಟೀಮ್ ಇಂಡಿಯಾಗಾಗಿ ವಿಶೇಷ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ನೂತನ ಜೆರ್ಸಿ ಮುಂದೆ ಚಾಂಪಿಯನ್ಸ್ ಎಂದು ಬರೆಯಲಾಗಿದೆ.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಜೂನ್ 29 ರಂದು ನಡೆದ ಫೈನಲ್ ಪಂದ್ಯದಲ್ಲಿ 7 ರನ್ಗಳ ರೋಚಕ ಜಯ ಸಾಧಿಸಿ ಟೀಮ್ ಇಂಡಿಯಾ (Team India) ಚಾಂಪಿಯನ್ ಪಟ್ಟಕ್ಕೇರಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ 59 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 76 ರನ್ ಸಿಡಿಸಿದ್ದರು. ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು. 177 ರನ್ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 7 ರನ್ಗಳ ಜಯ ಸಾಧಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.
ಇದೀಗ ಟಿ20 ವಿಶ್ವಕಪ್ನೊಂದಿಗೆ ಭಾರತಕ್ಕೆ ಆಗಮಿಸಿದ ಟೀಮ್ ಇಂಡಿಯಾ ತನ್ನ ಜೆರ್ಸಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದೆ. ಅಂದರೆ ಇಲ್ಲಿ ಭಾರತ ತಂಡದ ಜೆರ್ಸಿ ಕೆಳಗೆ ಚಾಂಪಿಯನ್ಸ್ ಎಂದು ಬರೆಯಲಾಗಿದ್ದು, ಇದರ ಜೊತೆ ಬಿಸಿಸಿಐ ಲೋಗೋ ಮೇಲೆ ಎರಡು ಬಾರಿ ವಿಶ್ವಕಪ್ ಗೆದ್ದಿರುವುದನ್ನು ಪ್ರತಿನಿಧಿಸುವಂತೆ 2 ಸ್ಟಾರ್ಗಳನ್ನು ನೀಡಲಾಗಿದೆ. ಇದೀಗ ವಿರಾಟ್ ಕೊಹ್ಲಿ ಧರಿಸಿರುವ ಚಾಂಪಿಯನ್ಸ್ ಜೆರ್ಸಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೇ ಜೆರ್ಸಿಯೊಂದಿಗೆ ಭಾರತ ತಂಡವು ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸಲಿದ್ದಾರೆ.