‘ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್ ನಿರ್ದೇಶನ ಮಾಡಿರುವ ‘ಮದಗಜ’ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಆಗಿದೆ. ಈ ಸಲುವಾಗಿ ಗುರುವಾರ (ನ.11) ಸುದ್ದಿಗೋಷ್ಠಿ ನಡೆಸಲಾಯಿತು. ಶ್ರೀಮರಳಿ, ಆಶಿಕಾ ರಂಗನಾಥ್ ಸೇರಿದಂತೆ ಇಡೀ ಚಿತ್ರತಂಡದವರು ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ‘ಮದಗಜ ಚಿತ್ರದ ಮೊದಲ ಪ್ರೆಸ್ ಮೀಟ್ ಇದು. ಅಪ್ಪು ಮಾಮನಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಹಾಡು ರಿಲೀಸ್ ಮಾಡಿದ್ದೇವೆ. ಅವರ ನೆನಪಿನಲ್ಲಿ ಪೂಜೆ ಸಲ್ಲಿಸಿದ್ದೇವೆ. ಅಪ್ಪು ಮಾಮನನ್ನು ನಾವು ಯಾರೂ ಮರೆಯೋಕೆ ಆಗಲ್ಲ. ಈ ಹಾಡನ್ನು ನಾನು ಅವರಿಗಾಗಿ ಡೆಡಿಕೇಟ್ ಮಾಡುತ್ತೇನೆ. ಅತ್ಯುತ್ತಮ ಗುಣಮಟ್ಟದಲ್ಲಿ ಮೂಡಿಬಂದಿರುವ ಈ ಹಾಡನ್ನು ಅವರು ನೋಡಿದ್ದರು’ ಎಂದು ಶ್ರೀಮುರಳಿ.
ಟೈಟಲ್ ಸಾಂಗ್ ನೋಡಿದ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ‘ಈ ಹಾಡನ್ನು ದೊಡ್ಡ ಪರದೆ ಮೇಲೆ ನೋಡಲು ಕಾಯುತ್ತಿದ್ದೇವೆ. ರವಿ ಬಸ್ರೂರು ಸಂಗೀತ ಸೂಪರ್ ಆಗಿದೆ’ ಎಂಬಿತ್ಯಾದಿ ಕಮೆಂಟ್ಗಳ ಮೂಲಕ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬೃಹತ್ ಸೆಟ್ಗಳು ಮತ್ತು ಅದ್ದೂರಿ ಮೇಕಿಂಗ್ನಿಂದಾಗಿ ಈ ಹಾಡು ಗಮನ ಸೆಳೆಯುತ್ತಿದೆ. ಶ್ರೀಮುರಳಿ ಡ್ಯಾನ್ಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡಿಗೆ ಸಂತೋಷ್ ವೆಂಕಿ ಧ್ವನಿ ನೀಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ:
ಪುನೀತ್ ನಿಧನದ ಬಳಿಕ ಜಿಮ್ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ
ಪುನೀತ್ ಸಾವಿನಲ್ಲೂ ಲಾಭ ಮಾಡಲು ಪ್ರಯತ್ನಿಸಿದ್ರಾ ರಜನಿಕಾಂತ್? ಸಿಟ್ಟಾದ ಜನರಿಂದ ಕಟು ಟೀಕೆ