ಚಾಂಪಿಯನ್ಸ್ ಟ್ರೋಫಿ ಹೊಸ ಪ್ರೋಮೋ ಬಿಡುಗಡೆ; ಪಾಕಿಸ್ತಾನವನ್ನು ಗೇಲಿ ಮಾಡಿದ ಫ್ಯಾನ್ಸ್

ಚಾಂಪಿಯನ್ಸ್ ಟ್ರೋಫಿ ಹೊಸ ಪ್ರೋಮೋ ಬಿಡುಗಡೆ; ಪಾಕಿಸ್ತಾನವನ್ನು ಗೇಲಿ ಮಾಡಿದ ಫ್ಯಾನ್ಸ್

ಪೃಥ್ವಿಶಂಕರ
|

Updated on: Dec 09, 2024 | 10:23 PM

ICC Champions Trophy 2025 Promo: ಚಾಂಪಿಯನ್ಸ್ ಟ್ರೋಫಿಯ ಪ್ರಸಾರದ ಹಕ್ಕನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ತನ್ನ ಎಕ್ಸ್ ಖಾತೆಯಲ್ಲಿ ಪಂದ್ಯಾವಳಿಗೆ ಸಂಬಂಧಿಸಿದ 20 ಸೆಕೆಂಡ್​ಗಳ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಈ ಪ್ರೋಮೋ ಬಿಡುಗಡೆಯ ನಂತರ ಟೀಂ ಇಂಡಿಯಾ ಅಭಿಮಾನಿಗಳು ಪಾಕಿಸ್ತಾನವನ್ನು ಇನ್ನಿಲ್ಲದಂತೆ ಗೇಲಿ ಮಾಡಿದ್ದಾರೆ.

ಮುಂದಿನ ವರ್ಷ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಇದುವರೆಗೆ ಪ್ರಕಟಗೊಂಡಿಲ್ಲ. ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳಿಗೆ ತೆರೆ ಬೀಳದ ಹೊರತು ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಗಳಿಲ್ಲ. ಆದಾಗ್ಯೂ ಈ ನಡುವೆ ಪಂದ್ಯಾವಳಿಯ ಪ್ರಸಾರದ ಹಕ್ಕನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ತನ್ನ ಎಕ್ಸ್ ಖಾತೆಯಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದ 20 ಸೆಕೆಂಡ್​ಗಳ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಈ ಪ್ರೋಮೋ ಬಿಡುಗಡೆಯ ನಂತರ ಟೀಂ ಇಂಡಿಯಾ ಅಭಿಮಾನಿಗಳು ಪಾಕಿಸ್ತಾನವನ್ನು ಇನ್ನಿಲ್ಲದಂತೆ ಗೇಲಿ ಮಾಡಿದ್ದಾರೆ.​

ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ

ವಾಸ್ತವವಾಗಿ ಬರೋಬ್ಬರಿ 7 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಾಗುತ್ತಿದೆ. ಇದರ ಆತಿಥ್ಯದ ಹಕ್ಕನ್ನು ಹಾಲಿ ಚಾಂಪಿಯನ್ ಪಾಕಿಸ್ತಾನ ಪಡೆದುಕೊಂಡಿದೆ. ಆದರೆ ಪಾಕಿಸ್ತಾನಕ್ಕೆ ಟೀಂ ಇಂಡಿಯಾವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಎಂಬುದು ಬಿಸಿಸಿಐ ಒತ್ತಾಯವಾಗಿದೆ. ಆದರೆ ಬಿಸಿಸಿಐನ ಈ ಒತ್ತಾಯಕ್ಕೆ ಪಾಕಿಸ್ತಾನ ಮಣಿಯುತ್ತಿಲ್ಲ. ಹೀಗಾಗಿ ಪಾಕಿಸ್ತಾನದ ಮನವೊಲಿಸುವ ಕೆಲಸವನ್ನು ಐಸಿಸಿ ನಿರಂತರವಾಗಿ ನಡೆಸುತ್ತಿದೆ. ಇದಕ್ಕೆ ಐಸಿಸಿ ಸಭೆಗಳನ್ನು ನಡೆಸುತ್ತಿದೆ. ಆದಾಗ್ಯೂ ಈ ಸಮಸ್ಯೆಗೆ ಇನ್ನು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಈ ನಡುವೆ ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿರುವ ಪ್ರೋಮೋದಲ್ಲೂ ಆತಿಥೇಯ ರಾಷ್ಟ್ರದ ಬಗ್ಗೆಯಾಗಲಿ ಆತಿಥ್ಯ ನೀಡುತ್ತಿರುವ ಕ್ರೀಡಾಂಗಣದ ಬಗ್ಗೆಯಾಗಲಿ ಚೂರೇ ಚೂರು ಮಾಹಿತಿ ಇಲ್ಲ. ಇದರ ಜೊತೆಗೆ ಪ್ರೋಮೋ ಕೊನೆಯಲ್ಲಿ ಆತಿಥೇಯ ದೇಶದ ಹೆಸರನ್ನು ಸಹ ನಮೂದಿಸಿಲ್ಲ. ಹೀಗಾಗಿ ಪ್ರೋಮೋವನ್ನು ನೋಡಿದ ಟೀಂ ಇಂಡಿಯಾ ಅಭಿಮಾನಿಗಳು ಪಾಕಿಸ್ತಾನವನ್ನು ಗೇಲಿ ಮಾಡಲಾರಂಭಿಸಿದ್ದಾರೆ.

8 ತಂಡಗಳು ಭಾಗವಹಿಸಲಿವೆ

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಸೇರಿದಂತೆ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾಗವಹಿಸಲಿವೆ. ಕಳೆದ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಇಂಗ್ಲೆಂಡ್ ಆಯೋಜಿಸಿತ್ತು. ಸರ್ಫರಾಜ್ ಅಹ್ಮದ್ ನಾಯಕತ್ವದಲ್ಲಿ ಪಾಕಿಸ್ತಾನ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಸದ್ಯದ ಮಾಹಿತಿಯ ಪ್ರಕಾರ ಟೀಂ ಇಂಡಿಯಾದ ಪಂದ್ಯಗಳು ಪಾಕಿಸ್ತಾನದ ಹೊರಗೆ ಅಂದರೆ ಯುಎಇಯಲ್ಲಿ ನಡೆಯುವ ಸಾಧ್ಯತೆಗಳಿವೆ. ಆ ಪ್ರಕಾರ ಪಂದ್ಯಾವಳಿಯ ಲೀಗ್​ ಹಂತದ ಮೂರು ಪಂದ್ಯಗಳು ಹಾಗೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು (ಟೀಂ ಇಂಡಿಯಾ ಪ್ಲೇ ಆಫ್​ಗೆ ಅರ್ಹತೆ ಪಡೆದರೆ) ಯುಎಇಯಲ್ಲಿ ನಡೆಯಲ್ಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ