ಗೀತಮ್ ಕಾಲೇಜಿನ ಮೇಲೆ ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದ್ದಕ್ಕೆ ವಿದ್ಯಾರ್ಥಿನಿ ಸಾವು ಬಿಟ್ಟು ಬೇರೆ ಕಾರಣಗಳಿವೆಯೇ?

ಗೀತಮ್ ಕಾಲೇಜಿನ ಮೇಲೆ ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದ್ದಕ್ಕೆ ವಿದ್ಯಾರ್ಥಿನಿ ಸಾವು ಬಿಟ್ಟು ಬೇರೆ ಕಾರಣಗಳಿವೆಯೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 28, 2022 | 10:30 PM

ಆಕೆ ಇವರೆಲ್ಲರ ಸಹಪಾಠಿಯಾಗಿದ್ದರಿಂದ ಸಹಜವಾಗೇ ದುಃಖವಾಗಿರುತ್ತದೆ. ಸರಿ, ಹಸೀನಾ ಆತ್ಮಹತ್ಯೆ ಮೂಲಕವೇ ಸಾವನ್ನಪ್ಪಿದ್ದಾಳೆ ಅಂದುಕೊಳ್ಳೋಣ, ಕಲ್ಲು ತೂರಾಟದಿಂದ ಆಕೆಯ ಆತ್ಮಕ್ಕೆ ಶಾಂತಿ ಸಿಗುತ್ತದೆಯೇ? ಇದು ಯಾವ ಸೀಮೆ ಲಾಜಿಕ್ ಮಾರಾಯ್ರೇ?

ಗೀತಮ್ ವಿಶ್ವವಿದ್ಯಾಲಯದಲ್ಲಿ (Gitam University) ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದೆಲ್ಲ ಬೇಕಿರಲಿಲ್ಲ. ತಾವೇ ಓದುವ ಕಾಲೇಜಿನ ಮೇಲೆ ಮತ್ತು ವಾಸ ಮಾಡುವ ಹಾಸ್ಟೆಲ್ ಮೇಲೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿ ಕಿಟಕಿ ಬಾಗಿಲುಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ. ಯಾವ ಮಟ್ಟಿಗೆ ಕಲ್ಲು ತೂರಾಟ (stone pelting) ನಡೆದಿದೆ ಅಂತ ಚೂರಾಗಿ ಬಿದ್ದಿರುವ ಗಾಜಿನ ರಾಶಿ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಕೆಲಸಗಾರರು ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಯಾಕೆ ಕಲ್ಲು ತೂರಾಟ ನಡೆಸಿದ್ದು ಅಂತ ಇನ್ನೊಂದು ವಿಡಿಯೋನಲ್ಲಿ ಹೇಳಿದ್ದೇವೆ. ಕಾಲೇಜಿನಲ್ಲಿ ಇಂಜಿನೀಯರಿಂಗ್ ಓದುತ್ತಿದ್ದ ಉಗಾಂಡ (Uganda) ಮೂಲದ ವಿದ್ಯಾರ್ಥಿನಿಯೊಬ್ಬಳು (ಹಸೀನಾ) 6ನೇ ಮಹಡಿಯಲ್ಲಿ ಒಣಗಲು ಹಾಕಿದ ಬಟ್ಟೆಗಳನ್ನು ತೆಗೆಯುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಸತ್ತಿದ್ದಾಳೆ. ಅವಳ ಸಾವು ದಾರುಣ ಮತ್ತು ದುರದೃಷ್ಟಕರ.

ಆದರೆ ವಿದ್ಯಾರ್ಥಿಗಳು ಹಸೀನಾ ಕಾಲು ಜಾರಿ ಕೆಳಗೆ ಬಿದ್ದಿಲ್ಲ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ರೊಚ್ಚಿಗೆದ್ದು ಕಳೆದ ರಾತ್ರಿ (ಬುಧವಾರ) ಹೀಗೆ ಕಲ್ಲು ತೂರಾಟ ನಡೆಸಿದ್ದಾರೆ. ಆಕೆ ಇವರೆಲ್ಲರ ಸಹಪಾಠಿಯಾಗಿದ್ದರಿಂದ ಸಹಜವಾಗೇ ದುಃಖವಾಗಿರುತ್ತದೆ. ಸರಿ, ಹಸೀನಾ ಆತ್ಮಹತ್ಯೆ ಮೂಲಕವೇ ಸಾವನ್ನಪ್ಪಿದ್ದಾಳೆ ಅಂದುಕೊಳ್ಳೋಣ, ಕಲ್ಲು ತೂರಾಟದಿಂದ ಆಕೆಯ ಆತ್ಮಕ್ಕೆ ಶಾಂತಿ ಸಿಗುತ್ತದೆಯೇ? ಇದು ಯಾವ ಸೀಮೆ ಲಾಜಿಕ್ ಮಾರಾಯ್ರೇ?

ಹಸೀನಾ ಸಾವಿನ ಬಗ್ಗೆ ಅವರಿಗೆ ದುಃಖದ ಜೊತೆ ಅನುಮಾನವೂ ಇದ್ದರೆ, ಅದನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ತಿಳಿಸಲಿ ಅಥವಾ ಹತ್ತಿರದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲಿ. ಹೌದು ತಾನೆ? ಯೂನಿವರ್ಸಿಟಿಯವರು ಆಗಿರುವ ನಷ್ಟವನ್ನು ಯಾವುದೋ ಒಂದು ರೂಪದಲ್ಲಿ ಇವರಿಂದಲೇ ವಸೂಲು ಮಾಡುತ್ತಾರೆ. ಇಂಜಿನೀಯರಿಂಗ್ ಓದುವ ವಿದ್ಯಾರ್ಥಿಗಳಿಗೆ ಇಂಥ ಸಣ್ಣ ವಿಷಯವೂ ಗೊತ್ತಾಗಲಿಲ್ಲವೇ?

ಆದರೆ ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ವಿವಿಯ ಹಾಸ್ಟೆಲ್ ನಲ್ಲಿರುವ ಕನ್ನಡದ ವಿದ್ಯಾರ್ಥಿಗಳು ಮತ್ತು ತೆಲಂಗಾಣ ಹಾಗೂ ಆಂಧ್ರಪ್ರದೇಶ ತೆಲುಗು ಮಾತಾಡುವ ವಿದ್ಯಾರ್ಥಿಗಳ ಯಾವುದೋ ಕಾರಣಕ್ಕೆ ತಿಕ್ಕಾಟ ನಡೆಯುತ್ತಿದ್ದು ಅದರ ಫಲಶೃತಿಯೇ ಈ ಕಲ್ಲು ತೂರಾಟ. ಸುಂದರವಾದ ವಿವಿ ಆವರಣದಲ್ಲಿ ಪೊಲೀಸ್ ನಿಯೋಜನೆಗೊಳ್ಳುವಂತಾಗಿದ್ದಕ್ಕೆ, ಲಾಠಿ ಚಾರ್ಜ್ ಮಾಡುವಂಥ ಸನ್ನಿವೇಶ ಸೃಷ್ಟಿಯಾಗಿದ್ದಕ್ಕೆ ವಿದ್ಯಾರ್ಥಿಗಳೇ ಕಾರಣ.

ಇದನ್ನೂ ಓದಿ:  ವಿದ್ಯಾರ್ಥಿನಿಯೊಬ್ಬಳ ಸಾವಿನಿಂದ ರೊಚ್ಚಿಗೆದ್ದ ಗೀತಂ ವಿವಿ ವಿದ್ಯಾರ್ಥಿಗಳಿಂದ ಹಾಸ್ಟೆಲ್ ಮೇಲೆ ಕಲ್ಲು ತೂರಾಟ