ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್ಗೇರಿದ ಸಿಡ್ನಿ ಸಿಕ್ಸರ್ಸ್
Sydney Sixers Reach BBL Final: ಬಿಗ್ ಬ್ಯಾಷ್ ಲೀಗ್ ಫೈನಲ್‌ಗೆ ಸಿಡ್ನಿ ಸಿಕ್ಸರ್ಸ್ ತಂಡ ಲಗ್ಗೆ ಹಾಕಿದೆ. ಬಾಬರ್ ಅಜಂ ನಿರ್ಗಮನದ ನಂತರ ನಡೆದ ಪ್ಲೇಆಫ್ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ವಿರುದ್ಧ 57 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸ್ಟೀವ್ ಸ್ಮಿತ್ ಅವರ 65 ರನ್‌ಗಳ ಅಮೋಘ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ಸಿಡ್ನಿ ಫೈನಲ್ ಟಿಕೆಟ್ ದೃಢಪಡಿಸಿಕೊಂಡಿದೆ.
ಬಿಗ್ ಬ್ಯಾಷ್ ಲೀಗ್ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರ ಕಳಪೆ ಪ್ರದರ್ಶನ ಹಾಗೂ ವಿವಾದಗಳಿಂದ ಸಾಕಷ್ಟು ಸದ್ದು ಮಾಡಿದ್ದ ಸಿಡ್ನಿ ಸಿಕ್ಸರ್ಸ್ ತಂಡ ಇದೀಗ ಫೈನಲ್ಗೇರುವಲ್ಲಿ ಯಶಸ್ವಿಯಾಗಿದೆ. ಬಾಬರ್ ಆಝಂ ತಂಡದಿಂದ ಹೊರಬಿದ್ದ ಬಳಿಕ ನಡೆದ ಪ್ಲೇಆಫ್ ಸುತ್ತಿನ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವನ್ನು ಎದುರಿಸಿದ್ದ ಸಿಡ್ನಿ ಸಿಕ್ಸರ್ಸ್ 57 ರನ್‌ಗಳಿಂದ ಪಂದ್ಯವನ್ನು ಗೆದ್ದು ಫೈನಲ್‌ಗೆ ಟಿಕೆಟ್ ಪಡೆಯಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಡ್ನಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಎಲ್ಲಾ ಬ್ಯಾಟ್ಸ್ಮನ್ಗಳು ಉತ್ತಮ ಆರಂಭವನ್ನೇ ಪಡೆದರು. ಆದರೆ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಸ್ಟೀವ್ ಸ್ಮಿತ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 65 ರನ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಹೋಬಾರ್ಟ್, ಸಿಡ್ನಿ ಸಿಕ್ಸರ್ಸ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ಬೆನ್ ಡ್ವಾರ್ಷಿಯಸ್ 26 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರೆ, ಮಿಚೆಲ್ ಸ್ಟಾರ್ಕ್ ಕೂಡ 4 ಓವರ್‌ಗಳಲ್ಲಿ ಕೇವಲ 29 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ಶಾನ್ ಅಬಾಟ್ ಮತ್ತು ಜೋಯಲ್ ಡೇವಿಡ್ ತಲಾ 2 ವಿಕೆಟ್ ಪಡೆದರು. ಜ್ಯಾಕ್ ಎಡ್ವರ್ಡ್ಸ್ ಒಂದು ವಿಕೆಟ್ ಪಡೆದರು. ಅಂತಿಮವಾಗಿ ಹೋಬಾರ್ಟ್ 141 ರನ್‌ಗಳಿಗೆ ಔಟಾಯಿತು.