ಲಾಲ್ಬಾಗ್‌ನ 6 ಎಕರೆ ಅಲ್ಲ, 6 ಇಂಚನ್ನೂ ಸುರಂಗ ಮಾಡಲು ಬಿಡಲ್ಲ: ಗುಡುಗಿದ ತೇಜಸ್ವಿ ಸೂರ್ಯ
ಲಾಲ್ಬಾಗ್‌ನಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 20,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಶ್ರೀಮಂತರಿಗಷ್ಟೇ ಮೀಸಲಾಗಿದೆ ಎಂದು ಟೀಕಿಸಿದ ಅವರು, ಐತಿಹಾಸಿಕ ಲಾಲ್ಬಾಗ್‌ನ ಒಂದಿಂಚು ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಗುಡುಗಿದ್ದಾರೆ.
ಬೆಂಗಳೂರು, ಅಕ್ಟೋಬರ್ 23: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಲಾಲ್ಬಾಗ್‌ನಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ನಗರ ಅಭಿವೃದ್ಧಿ ಇಲಾಖೆಯ ತಜ್ಞರ ಸಮಿತಿಯೇ ಯೋಜನೆಯ ಡಿಪಿಆರ್ ಸರಿಯಿಲ್ಲ ಎಂದು ಹೇಳಿರುವುದನ್ನು ಸೂರ್ಯ ಉಲ್ಲೇಖಿಸಿದ್ದಾರೆ. 20,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಕೇವಲ ಶೇ 10 ರಷ್ಟು ಕಾರು ಮಾಲೀಕರಿಗೆ ಪ್ರಯೋಜನಕಾರಿಯಾಗಿದ್ದು, ಶೇ 90 ರಷ್ಟು ಸಾರ್ವಜನಿಕ ಸಾರಿಗೆ ಬಳಕೆದಾರರನ್ನು ಕಡೆಗಣಿಸಲಾಗಿದೆ ಎಂದು ಅವರು ಟೀಕಿಸಿದ್ದಾರೆ. ಇದನ್ನು ಆರ್ಥಿಕ ಅಸ್ಪೃಶ್ಯತೆ ಎಂದು ಬಣ್ಣಿಸಿದ್ದಾರೆ.
ಲಾಲ್ಬಾಗ್‌ನ ಆರು ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಸುರಂಗ ರಸ್ತೆ ನಿರ್ಮಿಸುವ ಪ್ರಸ್ತಾವನೆಯನ್ನು ಸೂರ್ಯ ವಿರೋಧಿಸಿದ್ದಾರೆ. ಲಾಲ್ಬಾಗ್‌ನಲ್ಲಿರುವ 3000 ಮಿಲಿಯನ್ ವರ್ಷ ಹಳೆಯ ಬಂಡೆಯು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾಗಿದ್ದು, ಇದನ್ನು ನಾಶಪಡಿಸಲು ಮುಂದಾಗಿರುವುದನ್ನು ಖಂಡಿಸಿದ್ದಾರೆ. ಯಾವುದೇ ವೈಜ್ಞಾನಿಕ ಅಧ್ಯಯನ ಮತ್ತು ಪರಿಣಾಮದ ಕುರಿತಾದ ವಿಶ್ಲೇಷಣೆ ಇಲ್ಲದೆ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮೆಟ್ರೋ ಮಾರ್ಗವಿದ್ದರೂ ಸುರಂಗ ರಸ್ತೆ ಅಗತ್ಯವಿಲ್ಲ ಎಂದಿರುವ ಸೂರ್ಯ, ಲಾಲ್ಬಾಗ್‌ನ ಒಂದಿಂಚು ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಈಗಾಗಲೇ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆನ್ನೂ (ಪಿಐಎಲ್) ಸಲ್ಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
