ಮರಿ ವೀರಪ್ಪನ್‌ನ ಕರಾಳ ಕಥೆಗಳು: ಬಗೆದಷ್ಟೂ ಬಯಲಾಗ್ತಿದೆ ಗೋವಿಂದನ ಅಪರಾಧ ಚಟುವಟಿಕೆಗಳು
ಚಾಮರಾಜನಗರದ ಮರಿ ವೀರಪ್ಪನ್ ಅಲಿಯಾಸ್ ಗೋವಿಂದನ ಕರಾಳ ಕಥೆಗಳು ಒಂದೊಂದಾಗಿ ಬಯಲಾಗುತ್ತಿವೆ. ಹುಲಿ ಬೇಟೆ, ಜಿಂಕೆ ಹತ್ಯೆ, ಬೆದರಿಕೆ, ಸುಲಿಗೆ ಮತ್ತು ಪ್ರತಿಭಟನೆ ಪ್ರಚೋದನೆಯಂತಹ ಹಲವು ಅಪರಾಧ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಹೊರಬಂದ ನಂತರವೂ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರೆಸಿದ್ದಾನೆ. ಈತನ ವಿರುದ್ಧ ರೌಡಿ ಶೀಟ್ ಸಹ ತೆರೆಯಲಾಗಿದೆ.
ಚಾಮರಾಜನಗರ, ಸೆಪ್ಟೆಂಬರ್ 11: ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಗೋವಿಂದ ಅಲಿಯಾಸ್ ಮರಿ ವೀರಪ್ಪನ್ ಕರಾಳ ಕಥೆಗಳು ಒಂದೊಂದಾಗಿ ಬಯಲಾಗುತ್ತಿವೆ. ಕೇವಲ 33 ವರ್ಷ ವಯಸ್ಸಿನ ಈತ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನ್ಯಾಯಾಂಗ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದ ನಂತರವೂ ತನ್ನ ಚಟುವಟಿಕೆಗಳನ್ನು ಮುಂದುವರೆಸಿದ್ದಾನೆ. ಗೋವಿಂದನ ವಿರುದ್ಧ 2022-23ರಲ್ಲಿ ರಾಮಾಪುರ ಪೊಲೀಸ್ ಠಾಣೆಯಲ್ಲಿ ಮೊದಲ ಗಲಾಟೆ ಪ್ರಕರಣ ದಾಖಲಾಗಿತ್ತು. ನಂತರ ಪ್ರತಿ ವರ್ಷ ಒಂದಲ್ಲ ಒಂದು ಪ್ರಕರಣಗಳು ದಾಖಲಾಗುತ್ತಲೇ ಇವೆ. ಕಳೆದ ಒಂದೂವರೆ ವರ್ಷದ ಹಿಂದೆ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿಯೊಂದನ್ನು ಐದು ಭಾಗಗಳಾಗಿ ಕತ್ತರಿಸಿ ಹಾಕಿದ ಪ್ರಕರಣದಲ್ಲಿ ಈತನ ಕೈವಾಡವಿತ್ತು. ಜಿಂಕೆ ಬೇಟೆ ಪ್ರಕರಣದಲ್ಲೂ ಫಾರೆಸ್ಟ್ ಆಕ್ಟ್ 1972ರ ಅಡಿಯಲ್ಲಿ ಈತನ ಮೇಲೆ ಕೇಸ್ ಆಗಿತ್ತು. ಇದಲ್ಲದೆ, ಜನರಿಗೆ ಬೆದರಿಕೆ ಹಾಕುವುದು, ಸುಲಿಗೆ ಮಾಡುವುದು ಈತನ ಕೃತ್ಯಗಳಲ್ಲಿ ಸೇರಿವೆ. ಆಗಸ್ಟ್ 15ರಂದು ಹನೂರಿನಲ್ಲಿ ನಡೆದ ಘಟನೆಯಲ್ಲಿ, ಅರಣ್ಯ ಕಚೇರಿಗೆ ನುಗ್ಗಲು ಪ್ರತಿಭಟನಾಕಾರರನ್ನು ಪ್ರಚೋದಿಸುವ ಕೆಲಸವನ್ನು ಮರಿ ವೀರಪ್ಪನ್ ಮಾಡಿದ್ದು, ಇದಕ್ಕೆ ಸಾಕ್ಷ್ಯಗಳು ಲಭ್ಯವಿವೆ. ಇಂತಹ ಹಲವು ಅಪರಾಧ ಕೃತ್ಯಗಳಿಗಾಗಿ ಈತನ ವಿರುದ್ಧ ರೌಡಿ ಶೀಟ್ ಸಹ ತೆರೆಯಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
