ಮುಡಾ ಹಗರಣ: ಮುಖ್ಯಮಂತ್ರಿ ಪತ್ನಿಯ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿ ಜಮೀನು ತನ್ನದು ಎಂದಿದ್ದಾರೆ: ಆರ್ಟಿಐ ಕಾರ್ಯಕರ್ತ
ಆಗಿನ ಮೈಸೂರು ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಮಾತು ಹಾಗಿರಲಿ, ಖುದ್ದು ಮಲ್ಲಿಕಾರ್ಜುನ ಅವರು ಲ್ಯಾಂಡ್ ಕನ್ವರ್ಷನ್ ಆಗುವ ದಿನಾಂಕದಂದು ಸ್ಥಳದಲ್ಲಿ ಹಾಜರಿರಲಿಲ್ಲ. ಕನ್ವರ್ಷನ್ ಪ್ರಕ್ರಿಯೆ ನಡೆಯುವಾಗ ಅಧಿಕಾರಿಗಳು, ಸರ್ವೇಯರ್ ಮತ್ತು ಕಂದಾಯ ನಿರೀಕ್ಷರ ಜೊತೆ ಜಮೀನಿನ ಮಾಲೀಕ ಸ್ಥಳದಲ್ಲಿ ಹಾಜರಿದ್ದು ಮಹಜರ್ ಮತ್ತು ಪಂಚನಾಮೆಯನ್ನು ವೀಕ್ಷಿಸಬೇಕಾಗುತ್ತದೆ ಎಂದು ಗಂಗರಾಜು ಹೇಳುತ್ತಾರೆ.
ಮೈಸೂರು: ಮುಡಾ ಸೈಟು ಹಂಚಿಕೆ ಸಂಬಂಧ ಎದ್ದಿರುವ ವಿವಾದಕ್ಕೆ ಮೈಸೂರು ಭಾಗದ ಆರ್ ಟಿಐ ಕಾರ್ಯಕರ್ತರೊಬ್ಬರು ಹೊಸ ತಿರುವು ನೀಡಿದ್ದಾರೆ. ಮೈಸೂರಿನ ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಗಂಗರಾಜು ಹೆಸರಿನ ಕಾರ್ಯಕರ್ತ ಹೇಳುವ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಸಹೋದರ ಮಲ್ಲಿಕಾರ್ಜುನ ಅವರು ಈಗ ವಿವಾದಲ್ಲಿರುವ ಜಮೀನಿಗಾಗಿ ನಕಲಿ ದಾಖಲೆ ಪತ್ರಗಳನ್ನು ಮಾಡಿಸಿದ್ದಾರೆ. ಗಂಗರಾಜು ಹೇಳೋದೇನೆಂದರೆ, 1996-97ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿವಾದಿತ 3.16 ಜಮೀನನ್ನು ಸ್ವಾಧೀನ ಮಾಡಿಕೊಂಡು ಅದನ್ನು ಡೆವಲಪ್ ಮಾಡಿ ಸೈಟುಗಳನ್ನಾಗಿ ಪರಿವರ್ತಿಸಿ ಹಂಚಿಕೆ ಮಾಡಿರುತ್ತದೆ. ಅದರೆ ಅದೇ ಜಮೀನನ್ನು ಮಲ್ಲಿಕಾರ್ಜುನ 2004ರಲ್ಲಿ ₹ 9.50 ಲಕ್ಷಗಳಿಗೆ ಖರೀದಿ ಮಾಡಿರುವಂತೆ ಮತ್ತು ಅದು ಖುಷ್ಕಿ ಜಮೀನು ಎಂಬಂತೆ ಕಾಗದ ಪತ್ರಗಳನ್ನು ಮಾಡಿಸುತ್ತಾರೆ.
1997ರಲ್ಲಿ ಮುಡಾದಿಂದ ಸ್ವಾಧೀನ ಆಗಿದ್ದ ಜಮೀನಲ್ಲಿ ಸೈಟುಗಳನ್ನು ಮಾಡಿ ಹಂಚಲಾಗಿತ್ತು ಮತ್ತು ಯಾರಿಗೆಲ್ಲ ಹಂಚಲಾಗಿತ್ತೆನ್ನುವುದನ್ನು ಸೂಚಿಸುವ ದಾಖಲಾತಿ ಗಂಗರಾಜು ತಮ್ಮೊಂದಿಗಿಟ್ಟುಕೊಂಡಿದ್ದಾರೆ. ಸೈಟುಗಳಾಗಿ ಪರಿವರ್ತನೆಗೊಂಡ ಜಮೀನು ಖುಷ್ಕಿ ಹೇಗಾಗುತ್ತದೆ ಅಂತ ಗಂಗರಾಜು ಪ್ರಶ್ನಿಸುತ್ತಾರೆ! ನಂತರ 2005ರಲ್ಲಿ ಆ ನಕಲಿ ಕಾಗದ ಪತ್ರಗಳ ಮೂಲಕ ಮಲ್ಲಿಕಾರ್ಜುನ ಕೃಷಿ ಜಮೀನನ್ನು ವಸತಿ ಜಮೀನಾಗಿ ಪರಿವರ್ತಸಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಾರೆ ಮತ್ತು ಯಾವುದೇ ಅಧಿಕಾರಿಯಿಂದ ಸ್ಥಳ ಪರಿಶೀಲನೆ ಕೂಡ ನಡೆಸದೆ ಜಿಲ್ಲಾಧಿಕಾರಿ ಭೂಪರಿವರ್ತನೆಗಾಗಿ ಆದೇಶ ಜಾರಿ ಮಾಡುತ್ತಾರೆ ಎಂದು ಗಂಗರಾಜು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ: ಏನೂ ಮಾಡಿಲ್ಲವೆಂದಾದರೆ ಡಿಸಿ ವರ್ಗಾವಣೆ ಏಕೆ, ಸಿದ್ದರಾಮಯ್ಯಗೆ ಜೋಶಿ ಪ್ರಶ್ನೆ