ಪಿಎಸ್ಐ ನೇಮಕಾತಿ ಹಗರಣದ ಮೂಲ ಕಿಂಗ್ಪಿನ್ ಹೆಸರು ಬಯಲು ಮಾಡಿದರೆ ಸರ್ಕಾರವೇ ಉರುಳಿ ಹೋಗುತ್ತದೆ: ಕುಮಾರಸ್ವಾಮಿ
ಪಿಎಸ್ಐ ನೇಮಕಾತಿ ಹಗರಣದ ಮೂಲ ಕಿಂಗ್ ಪಿನ್ ಹೆಸರು ಬಯಲಿಗೆ ಬಂದರೆ ಸರ್ಕಾರವೇ ಬುಡಮೇಲಾಗುತ್ತದೆ, ಉರುಳಿ ಬೀಳುತ್ತದೆ ಅಂತ ಅವರು ಬಾಂಬ್ ಸಿಡಿಸುತ್ತಾರೆ. ಆ ಕಿಂಗ್ ಪಿನ್ ಅನ್ನು ಇವರು ಮುಟ್ಟಲು ಕೂಡ ಸಾಧ್ಯವಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ.
Hassan: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಸೆಲೆಕ್ಟಿವ್ ಆಗಿ ಟೀಕಾಸ್ತ್ರ ಪ್ರಯೋಗಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಈಗ ಪೂರ್ಣ ಪ್ರಮಾಣದ ಅಕ್ರಮಣ ನಡೆಸುತ್ತಿದ್ದಾರೆ. ನಿಮಗೆ ನೆನಪಿರಬಹುದು, ಬಜೆಟ್ ಅಧಿವೇಶನ ನಡೆಯುತ್ತಿದ್ದಾಗ ಅವರು ಆಡಳಿತ ಪಕ್ಷಕ್ಕಿಂತ ಜಾಸ್ತಿ ಕಾಂಗ್ರೆಸ್ (Congress) ಪಕ್ಷದ ಮೇಲೆ ಮುಗಿ ಬೀಳುತ್ತಿದ್ದರು. ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸಿದ ನಂತರವೇ ಅವರ ದಿನ ಶುರುವಾಗುತಿತ್ತು. ಹೌದು ತಾನೇ? ಅದರೆ ಅವರ ಧೋರಣೆ ಬದಲಾಗಿದೆ ಮಾರಾಯ್ರೇ. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಶುಕ್ರವಾರ ಅವರು ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಬೊಮ್ಮಾಯಿ ಸರ್ಕಾರಕ್ಕೆ ದಿಗಿಲು ಹುಟ್ಟಿಸುವ ಮಾತುಗಳನ್ನು ಹೇಳಿದರು.
ಪಿಎಸ್ಐ ನೇಮಕಾತಿ ಹಗರಣದ ಮೂಲ ಕಿಂಗ್ ಪಿನ್ ಹೆಸರು ಬಯಲಿಗೆ ಬಂದರೆ ಸರ್ಕಾರವೇ ಬುಡಮೇಲಾಗುತ್ತದೆ, ಉರುಳಿ ಬೀಳುತ್ತದೆ ಅಂತ ಅವರು ಬಾಂಬ್ ಸಿಡಿಸುತ್ತಾರೆ. ಆ ಕಿಂಗ್ ಪಿನ್ ಅನ್ನು ಇವರು ಮುಟ್ಟಲು ಕೂಡ ಸಾಧ್ಯವಾಗುವುದಿಲ್ಲ, ಅವರು ಭವಿಷ್ಯದ ನಾಯಕ, ಈ ಸರ್ಕಾರಕ್ಕೆ ಅವರ ಹೆಸರು ಹೇಳುವುದು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ.
ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ ಅವರು ಶಾಮೀಲಾಗಿದ್ದಾರೆಯೇ ಅಂತ ಅವರನ್ನು ಕೇಳಿದಾಗ ಪಿಎಸ್ಐ ನೇಮಕಾತಿ ಹಗರಣದಲ್ಲಿ ನಡೆದಿರುವ ಅಕ್ರಮಕ್ಕಿಂತ ದೊಡ್ಡ ಪ್ರಮಾಣದ ಆ ಇಲಾಖೆಯಲ್ಲಿ ನಡೆದಿದೆ. ಈ ಸರ್ಕಾರದಲ್ಲಿರುವವರೆಲ್ಲ ಒಂದೊಂದು ಇಲಾಖೆಯನ್ನು ಗುತ್ತಿಗೆ ಹಿಡಿದುಕೊಂಡು ಬಿಟ್ಟಿದ್ದಾರೆ. ಸಮಯ ಬಂದಾಗ ಅದರ ಚರ್ಚೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.