37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ

Updated on: Jul 26, 2025 | 12:54 PM

West Indies vs Australia: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ 214 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಟಿಮ್ ಡೇವಿಡ್ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡವು 16.1 ಓವರ್​ಗಳಲ್ಲಿ 215 ರನ್ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಸೇಂಟ್ ಕಿಟ್ಸ್​ನ ವಾರ್ನರ್ ಪಾರ್ಕ್​ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಿಮ್ ಡೇವಿಡ್ ವಿಸ್ಫೋಟಕ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಶಾಯ್ ಹೋಪ್ (102) ಅವರ ಶತಕದ ನೆರವಿನೊಂದಿಗೆ  20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ಒತ್ತು ನೀಡಿದರು. ಪರಿಣಾಮ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಇದರೊಂದಿಗೆ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಟಿಮ್ ಡೇವಿಡ್ ಪಾಲಾಯಿತು.

ಇದಾದ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ಟಿಮ್ ಡೇವಿಡ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಈ ಮೂಲಕ ಕೇವಲ 37 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಈ ಶತಕದೊಂದಿಗೆ ಆಸ್ಟ್ರೇಲಿಯಾ ಪರ ಅತೀ ವೇಗದ ಟಿ20 ಶತಕ ಬಾರಿಸಿದ ದಾಖಲೆ ಟಿಮ್ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ಜೋಶ್ ಇಂಗ್ಲಿಸ್ ಹೆಸರಿನಲ್ಲಿತ್ತು.  2024 ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಕೇವಲ 43 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಇದೀಗ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿ ಟಿಮ್ ಡೇವಿಡ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ 16.1 ಓವರ್​ಗಳಲ್ಲಿ 215 ರನ್​ಗಳ ಗುರಿ ಮುಟ್ಟಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.