ಸಮಸ್ಯೆ ಕೇಳಿದ ಪೊಲೀಸರ ಬಳಿ ‘ಮಗನಿಗೆ ಹೆಣ್ಣು ಕೊಡಿಸಿ’ ಎಂದ ಅಜ್ಜಿ! ವಿಡಿಯೋ ವೈರಲ್
‘ಮನೆಮನೆ ಪೊಲೀಸ್’ ಅಭಿಯಾನದಡಿ ಕರ್ನಾಟಕದಲ್ಲಿ ಪೊಲೀಸರು ಮನೆ ಮನೆಗಳಿಗೆ ತೆರಳಿ ನಾಗರಿಕರ ಅಹವಾಲುಗಳನ್ನು ಆಲಿಸುತ್ತಾರೆ. ಹೀಗೆ ಮನೆಗೆ ಬಂದ ಪೊಲೀಸರ ಬಳಿ ತುಮಕೂರಿನ ಮಧುಗಿರಿಯ ಗ್ರಾಮದಲ್ಲಿ ಅಜ್ಜಿಯೊಬ್ಬಳು, ‘ಮಗನಿಗೆ ಹೆಣ್ಣು ಸಿಗುತ್ತಿಲ್ಲ, ಹುಡುಕಿ ಕೊಡುವಿರಾ’ ಎಂದು ಕೇಳಿದ ವಿಡಿಯೋ ಈಗ ವೈರಲ್ ಆಗುತ್ತಿದೆ.
ತುಮಕೂರು, ಅಕ್ಟೋಬರ್ 10: ಕರ್ನಾಟಕ ಸರ್ಕಾರವು ಸಾರ್ವಜನಿಕರ ಸುರಕ್ಷತೆ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೆಲವು ತಿಂಗಳುಗಳ ಹಿಂದೆ ‘ಮನೆಮನೆ ಪೊಲೀಸ್’ ಎಂಬ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. ಅದರಂತೆ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ಅಜ್ಜಿಯೊಬ್ಬರ ಮನೆಗೆ ತೆರಳಿದ ಪೊಲೀಸರು, ‘ಏನಾದರೂ ಸಮಸ್ಯೆ ಇದೆಯೇ? ಬೀದಿ ದೀಪ ಎಲ್ಲ ಸರಿಯಾಗಿದೆಯೇ’ ಎಂದು ಪ್ರಶ್ನಿಸಿದ್ದಾರೆ. ಆಗ ಅಜ್ಜಿ, ‘ಹಾಗಾದರೆ ನನ್ನ ಮಗನಿಗೊಂದು ಹೆಣ್ಣು ಹುಡುಕಿಕೊಡಿ. ಅಷ್ಟೇ ನಮ್ಮ ಸಮಸ್ಯೆ. ಬೇರೇನಿಲ್ಲ’ ಎಂದಿದ್ದಾರೆ. ಆಗ ತಬ್ಬಿಬ್ಬಾದ ಪೊಲೀಸರಿಗೆ ಏನು ಹೇಳಬೇಕೆಂದೇ ತೋಚದಾಗಿದೆ. ಬಳಿಕ ಇದನ್ನು ನಮ್ಮ ಸಾಹೇಬರ ಗಮನಕ್ಕೆ ತಂದು ಏನಾದರೂ ಮಾಡಲು ಸಾಧ್ಯವೇ ಎಂದು ಪ್ರಯತ್ನಿಸುತ್ತೇವೆ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ. ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.
ಸಾರ್ವಜನಿಕ ಸಮಸ್ಯೆಗಳ ನಿರೀಕ್ಷೆಯಲ್ಲಿದ್ದ ಪೊಲೀಸರು ಈ ವೈಯಕ್ತಿಕ ಸಮಸ್ಯೆಯನ್ನು ಅಜ್ಜಿ ಹೇಳಿಕೊಂಡಿದ್ದರಿಂದ ಮತ್ತು ಮನವಿ ಮಾಡಿದ್ದರಿಂದ ಅಸಹಾಯಕರಾದರು. ನಂತರ, ನಿಮ್ಮ ಮನೆ ಮುಂದೆ ಬೀದಿ ದೀಪದ ಸಮಸ್ಯೆ ಇದೆಯೇ? ಕಂಬಗಳಲ್ಲಿರುವ ಲೈಟ್ ಎಲ್ಲ ಸರಿಯಾಗಿ ಆನ್ ಆಗುತ್ತಿವೆಯೇ ಎಂದು ಪ್ರಶ್ನಿಸಿದರು. ಅಲ್ಲದೆ, ನೀವು ಹೇಳಿರುವ ವಿಚಾರವಾಗಿ ನಮ್ಮ ಹಿರಿಯ ಅಧಿಕಾರಿಗಳ ಬಳಿ ಮಾತನಾಡಿ ಏನಾದರೂ ಮಾಡಲು ಸಾಧ್ಯವೇ ಎಂದು ಪ್ರಯತ್ನಿಸುತ್ತೇವೆ ಎಂದು ಅಜ್ಜಿಗೆ ಭರವಸೆ ನೀಡಿ ಅಲ್ಲಿಂದ ತೆರಳಿದರು.
ಸದ್ಯ, ಅಜ್ಜಿ ಮತ್ತು ಪೊಲೀಸರ ನಡುವಣ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಏನಿದು ಮನೆ ಮನೆ ಪೊಲೀಸ್ ಕಾರ್ಯಕ್ರಮ?
‘ಮನೆ ಮನೆಗೆ ಪೊಲೀಸ್’ ಎಂಬ ಯೋಜನೆಯು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. 2025ರ ಜುಲೈ 18 ರಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಯೋಜನೆಗೆ ಚಾಲನೆ ನೀಡಿದ್ದಾರೆ. ಉದ್ಘಾಟನೆ ವೇಳೆ ಪರಮೇಶ್ವರ್ ಹೇಳಿರುವ ಪ್ರಕಾರ, ಮನೆ ಮನೆಗೆ ಪೊಲೀಸರು ಭೇಟಿ ನೀಡುವ ಇಂಥದ್ದೊಂದು ಯೋಜನೆ ಅನುಷ್ಠಾನಗೊಂಡಿರುವುದು ದೇಶದಲ್ಲೇ ಮೊದಲಾಗಿದೆ.
ಮನೆ ಮನೆ ಪೊಲೀಸ್ ಯೋಜನೆಯಡಿ ಪೊಲೀಸರು ಏನು ಮಾಡುತ್ತಾರೆ?
ಮನೆ ಮನೆ ಪೊಲೀಸ್ ಯೋಜನೆಯಡಿ ಪೊಲೀಸರು ಆಯಾ ಠಾಣಾ ವ್ಯಾಪ್ತಿಯ ಪ್ರತಿ ಮನೆಗೂ ಭೇಟಿ ನೀಡುತ್ತಾರೆ. ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಜನರಲ್ಲಿ ಕಾನೂನು ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.