ಉಡುಪಿ, ಸೆ.30: ಪೆಟ್ರೋಲ್ ಬಂಕ್‌ನಲ್ಲಿ ಪಾರ್ಕ್ ಮಾಡಲಾಗಿದ್ದ ಮಂಗಳೂರು-ಕುಂದಾಪುರ ನಡುವೆ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಬಸ್ ಒಂದನ್ನು ಖತರ್ನಾಕ್ ಕಳ್ಳರು ಎಗರಿಸಿಕೊಂಡು ಪರಾರಿಯಾಗಿರುವ ವಿಲಕ್ಷಣ ಘಟನೆ ಉಡುಪಿ ನಗರದ ಚಿಟ್ಪಾಡಿಯಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಕಳವಿನ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದ್ದು, ಜಿಪಿಎಸ್ (GPS) ಟ್ರ್ಯಾಕಿಂಗ್ ವ್ಯವಸ್ಥೆಯ ನೆರವಿನಿಂದ ಪೊಲೀಸರು ಬಸ್ಸನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಚಿಟ್ಪಾಡಿಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ರಾತ್ರಿ ನಿಲ್ಲಿಸಲಾಗಿದ್ದ ಬಸ್ಸನ್ನು ಕದಿಯಲು ಇಬ್ಬರು ಕಳ್ಳರು ಸ್ಕೂಟಿಯಲ್ಲಿ ಬಂದಿದ್ದಾರೆ. ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಇಬ್ಬರಲ್ಲಿ ಓರ್ವ ಕಳ್ಳ, ಅನುಮಾನ ಬಾರದಿರಲಿ ಎಂದು ಬಸ್ ಸಿಬ್ಬಂದಿ ಧರಿಸುವ ಸಮವಸ್ತ್ರವನ್ನೇ (Uniform) ಧರಿಸಿಕೊಂಡಿದ್ದ. ಅಲ್ಲದೆ ಗುರುತು ಸಿಗದಿರಲಿ ಎಂದು ತಲೆಗೆ ಹೆಲ್ಮೆಟ್ ಕೂಡ ಹಾಕಿಕೊಂಡಿದ್ದ. ಸಲೀಸಾಗಿ ಬಸ್ ಹತ್ತಿದ ಆತ ಬಸ್ ಚಾಲೂ ಮಾಡಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಇನ್ನೊಬ್ಬ ಕಳ್ಳ ಸ್ಕೂಟಿಯಲ್ಲೇ ಆ ಬಸ್ಸನ್ನು ಹಿಂಬಾಲಿಸಿಕೊಂಡು ಹೋಗಿರುವುದು ಸಿಸಿಟಿವಿ ದೃಶ್ಯದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಬಸ್ ಕಳವಾದ ವಿಚಾರ ತಿಳಿಯುತ್ತಿದ್ದಂತೆ ಮಾಲೀಕರು ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಸ್‌ನಲ್ಲಿ ಅಳವಡಿಸಲಾಗಿದ್ದ ಜಿಪಿಎಸ್ ಲೊಕೇಶನ್ ಆಧಾರದ ಮೇಲೆ ತನಿಖೆ ನಡೆಸಿದಾಗ, ಕದ್ದ ಬಸ್ಸನ್ನು ಕಾಪು ತಾಲೂಕಿನ ಮುದರಂಗಡಿ ಸಮೀಪದ ಮುದ್ದಾಡಿ ಎಂಬಲ್ಲಿ ಬಿಟ್ಟು ಕಳ್ಳರು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧಾವಿಸಿದ ಉಡುಪಿ ನಗರ ಠಾಣೆಯ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಕಿಲಾಡಿ ಕಳ್ಳರ ಪತ್ತೆಗೆ ಜಾಲ ಬೀಸಲಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ