ಕೃಷ್ಣ ಮಠದ ಸುತ್ತಮುತ್ತ ಬಿಗಿ ಭದ್ರತೆ: ಪ್ರಧಾನಿ ಮೋದಿ ಸ್ವಾಗತಕ್ಕೆ ಉಡುಪಿ ಹೇಗೆ ಸಜ್ಜಾಗಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಗೆ ನಗರ ಸಂಪೂರ್ಣ ಸಜ್ಜಾಗಿದೆ. ಶ್ರೀ ಕೃಷ್ಣ ಮಠಕ್ಕೆ ಮೋದಿ ಭೇಟಿ ನೀಡುವ ಹಿನ್ನೆಲೆಯಲ್ಲಿ, ಬನ್ನಂಜೆಯಿಂದ ಕಲ್ಸಂಕದವರೆಗೆ 20 ನಿಮಿಷಗಳ ರೋಡ್ ಶೋ ಆಯೋಜಿಸಲಾಗಿದೆ. 3000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ಉಡುಪಿಯನ್ನು ಕೇಸರಿಮಯಗೊಳಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಇದು ಪ್ರಧಾನಿ ಆದ ನಂತರ ಮಠಕ್ಕೆ ಮೋದಿ ಅವರ ಮೊದಲ ಭೇಟಿಯಾಗಿದೆ.
ಉಡುಪಿ, ನವೆಂಬರ್ 27: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28 ರಂದು ಉಡುಪಿಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ನಗರ ಸಂಪೂರ್ಣವಾಗಿ ಸಜ್ಜಾಗಿದೆ. ನಗರವು ಸಂಪೂರ್ಣ ಕೇಸರಿಮಯವಾಗಿದ್ದು, ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿಯವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವ ಮುನ್ನ, ಬನ್ನಂಜೆಯಿಂದ ಕಲ್ಸಂಕದವರೆಗೆ ಸುಮಾರು 20 ನಿಮಿಷಗಳ ಕಾಲ ರೋಡ್ ಶೋ ನಡೆಸಲಿದ್ದಾರೆ. ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಈ ರೋಡ್ ಶೋ ಮಾರ್ಗದಲ್ಲಿ ಬಂಟಿಂಗ್ಸ್ ಮತ್ತು ಕೇಸರಿ ಪತಾಕೆಗಳನ್ನು ಹಾಕಲಾಗಿದೆ.
ಮೋದಿ ಭೇಟಿಗೆ ಹೇಗಿದೆ ಭದ್ರತೆ?
ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು 3000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಉಡುಪಿ ನಗರದ ಸುತ್ತಮುತ್ತ ನಿಯೋಜಿಸಲಾಗಿದೆ. ಎರಡು ಲೇಯರ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಒಂದು ಲೇಯರ್ ಪೊಲೀಸ್ ಭದ್ರತೆಗಾಗಿ ಮತ್ತು ಇನ್ನೊಂದು ಸಾರ್ವಜನಿಕರಿಗೆ ಮೀಸಲಾಗಿದೆ. ಪ್ರಧಾನಿ ಮೋದಿ ಅವರು ಪ್ರಧಾನಿಯಾದ ನಂತರ ಶ್ರೀ ಕೃಷ್ಣ ಮಠಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಉಡುಪಿ ನಗರ, ಪೊಲೀಸರು ಮತ್ತು ಜಿಲ್ಲಾಡಳಿತ ಕೊನೆಯ ಹಂತದ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದ್ದಾರೆ.
