ಮೂರುವರೆ ವರ್ಷ ಕಳೆದರೂ ಉಡುಪಿಗೆ ಸಿಗದ ಸುಸಜ್ಜಿತ ಜಿಲ್ಲಾ ಆಸ್ಪತ್ರೆ
ಉಡುಪಿ ಜಿಲ್ಲೆಯ ಬಹುನಿರೀಕ್ಷಿತ 250 ಹಾಸಿಗೆಗಳ ಸರ್ಕಾರಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿ ವರ್ಷಗಳೇ ಕಳೆದಿದ್ದರೂ ಇಂದಿಗೂ ಉದ್ಘಾಟನೆ ಭಾಗ್ಯ ದೊರೆತಿಲ್ಲ. ₹140 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಆಸ್ಪತ್ರೆಗೆ, ಅಗತ್ಯ ಸಿಬ್ಬಂದಿ ಹಾಗೂ ಉಪಕರಣಗಳಿಗೆ ಇನ್ನೂ ₹40 ಕೋಟಿ ಅನುದಾನದ ಅಗತ್ಯವಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವೈದ್ಯಕೀಯ ಸೇವೆ ದೊರೆಯದೆ ತೀವ್ರ ತೊಂದರೆಯಾಗುತ್ತಿದೆ.
ಉಡುಪಿ, ಸೆ.11: ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೌಲಭ್ಯಗಳಿದ್ದರೂ, ಸುಸಜ್ಜಿತ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕೊರತೆ ದಶಕಗಳಿಂದಲೂ ಇತ್ತು. ಈ ಹಿನ್ನೆಲೆಯಲ್ಲಿ 2020ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 250 ಹಾಸಿಗೆಗಳ ಆಸ್ಪತ್ರೆಗೆ 115 ಕೋಟಿ ರೂಪಾಯಿ ಮಂಜೂರು ಮಾಡಿದ್ದರು. 2021ರ ಆಗಸ್ಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಆದರೆ, ಮೂರುವರೆ ವರ್ಷಗಳೇ ಕಳೆದರೂ, ಸುಮಾರು 140 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಆಸ್ಪತ್ರೆ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸದ್ಯದ ಜಿಲ್ಲಾ ಆಸ್ಪತ್ರೆಯು (ಹಿಂದಿನ ತಾಲ್ಲೂಕು ಆಸ್ಪತ್ರೆ) ಆಧುನಿಕ ಸೌಲಭ್ಯಗಳು ಹಾಗೂ ಹಾಸಿಗೆ ಸಾಮರ್ಥ್ಯದಲ್ಲಿ ಸಾಕಷ್ಟಿಲ್ಲ. ನೂತನ ಆಸ್ಪತ್ರೆಗೆ ಇನ್ನೂ ಡಿ ಗ್ರೂಪ್ ನೌಕರರ ನೇಮಕ, ಪೀಠೋಪಕರಣ ಹಾಗೂ ಆಪರೇಷನ್ ಥಿಯೇಟರ್‌ಗೆ ಅಗತ್ಯವಿರುವ ಇಂಟೀರಿಯರ್ ಸೇರಿದಂತೆ ಸುಮಾರು 40 ಕೋಟಿ ರೂಪಾಯಿ ಅನುದಾನ ಬೇಕಾಗಿದೆ ಎಂದು ಅಂದಾಜಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ಮಾಫಿಯಾ ಅಥವಾ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಈ ವಿಳಂಬಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಈ ಸುಸಜ್ಜಿತ ಆಸ್ಪತ್ರೆಯು ಅತ್ಯಂತ ಅಗತ್ಯವಿದ್ದು, ಸರ್ಕಾರ ಕೂಡಲೇ ಗಮನಹರಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಿ ಆಸ್ಪತ್ರೆಯನ್ನು ಉದ್ಘಾಟಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
