VIDEO: ಬುಮ್ರಾರನ್ನೇ ಬೆಚ್ಚಿ ಬೀಳಿಸಿದ ವೈಭವ್ ಸೂರ್ಯವಂಶಿ

Updated on: Apr 08, 2026 | 8:29 AM

Rajasthan Royals vs Mumbai Indians: ಐಪಿಎಲ್​ನ 13ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 11 ಓವರ್​ಗಳಲ್ಲಿ 150 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 11 ಓವರ್​ಗಳಲ್ಲಿ 123 ರನ್​ಗಳಿಸಿ ಸೋಲೊಪ್ಪಿಕೊಂಡಿತು. ಈ ಸೋಲಿನ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ ಬೌಲರ್​ಗಳ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೊನೆಗೂ ಜಸ್​ಪ್ರೀತ್ ಬುಮ್ರಾ ಹಾಗೂ ವೈಭವ್ ಸೂರ್ಯವಂಶಿಯ ಮುಖಾಮುಖಿಯಾಗಿದೆ. ಈ ಮುಖಾಮುಖಿಯಲ್ಲಿ ಬುಮ್ರಾರನ್ನು ಬೆಂಡೆತ್ತುವಲ್ಲಿ ಯುವ ದಾಂಡಿಗ ಯಶಸ್ವಿಯಾಗಿದ್ದಾನೆ. ಅದು ಸಹ ಮೊದಲ ಎಸೆತದಲ್ಲೇ ಸಿಕ್ಸ್​ ಸಿಡಿಸುವ ಮೂಲಕ ಎಂಬುದು ವಿಶೇಷ.

ಅಂದರೆ ಇದೇ ಮೊದಲ ಬಾರಿ ಯಾರ್ಕರ್ ಸ್ಪೆಷಲಿಸ್ಟ್ ಖ್ಯಾತಿಯ ಜಸ್​ಪ್ರೀತ್ ಬುಮ್ರಾರನ್ನು ಎದುರಿಸಿದ್ದ ವೈಭವ್ ಸೂರ್ಯವಂಶಿ ತಾನೆದುರಿಸಿದ ಮೊದಲ ಬಾಲ್​ನಲ್ಲೇ ಸಿಕ್ಸ್ ಸಿಡಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

ಗುವಾಹಟಿಯಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್​ನ ದ್ವಿತೀಯ ಓವರ್​ನಲ್ಲಿ ಬುಮ್ರಾ ದಾಳಿಗಿಳಿದಿದ್ದರು. ಬುಮ್ರಾ ಎಸೆದ ಮೊದಲ ಎಸೆತವನ್ನೇ ಯಾವುದೇ ಭಯವಿಲ್ಲದೆ ಎದುರಿಸಿದ ವೈಭವ್, ಲಾಂಗ್-ಆನ್ ಮೇಲಿಂದ ಭರ್ಜರಿ ಸಿಕ್ಸರ್ ಸಿಡಿಸಿದರು.

ಇದಾದ ಬಳಿಕ ಅದೇ ಓವರ್‌ನಲ್ಲಿ ಬುಮ್ರಾ ಎಸೆದ ಶಾರ್ಟ್ ಪಿಚ್ ಎಸೆತವನ್ನು ಚಾಣಾಕ್ಷತನದಿಂದ ಪುಲ್ ಮಾಡಿದ ವೈಭವ್, ಚೆಂಡನ್ನು ಡೀಪ್ ಬ್ಯಾಕ್ ವರ್ಡ್ ಸ್ಕ್ವೇರ್ ಲೆಗ್ ಸ್ಟ್ಯಾಂಡ್ಸ್ ಗೆ ಅಟ್ಟಿದರು.

ಈ ಮೂಲಕ ಜಸ್​ಪ್ರೀತ್ ಬುಮ್ರಾ ಅವರ ಒಂದೇ ಓವರ್‌ನಲ್ಲಿ 14 ರನ್ ಕಬಳಿಸುವ ಮೂಲಕ ವೈಭವ್ ಸೂರ್ಯವಂಶಿ ತಮ್ಮ ಅಪ್ರತಿಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಈ ದೃಶ್ಯ ಕಂಡು ಬುಮ್ರಾ ಕೂಡ ಒಂದು ಕ್ಷಣ ದಂಗಾಗಿ, ನಂತರ ಮುಗುಳ್ನಗುತ್ತಾ ಆ ಹುಡುಗನ ಧೈರ್ಯವನ್ನು ಮೆಚ್ಚಿಕೊಂಡರು.

ವೈಭವ್ ಸೂರ್ಯವಂಶಿಯ ಈ ಭರ್ಜರಿ ಸಿಕ್ಸರ್​ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವ ದಾಂಡಿಗನ ಆರ್ಭಟಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಮಳೆಯ ಕಾರಣ 11 ಓವರ್‌ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ವೈಭವ್ ಕೇವಲ 14 ಎಸೆತಗಳಲ್ಲಿ 39 ರನ್ ಚಚ್ಚಿದರು. ಇದರಲ್ಲಿ ಒಟ್ಟು 5 ಸಿಕ್ಸರ್ ಹಾಗೂ 1 ಬೌಂಡರಿ ಸೇರಿತ್ತು. ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 11 ಓವರ್​ಗಳಲ್ಲಿ 150 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 11 ಓವರ್​ಗಳಲ್ಲಿ 123 ರನ್​ಗಳಿಸಿ 27 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

 

Follow Us