Varalakshmi Festival: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಜನರಿಂದ ತುಂಬಿ ಹೋಯ್ತು ಕೆ.ಆರ್ ಮಾರ್ಕೆಟ್!

Updated on: Aug 21, 2026 | 8:35 AM

ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ವರಮಹಾಲಕ್ಷ್ಮಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಹೂವು, ಹಣ್ಣು, ಪೂಜಾ ಸಾಮಾಗ್ರಿಗಳಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದಾರೆ. ಸಂಚಾರ ಅಡಚಣೆ ತಪ್ಪಿಸಲು ಪೊಲೀಸರು ರಸ್ತೆ ಮಧ್ಯೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿದ್ದಾರೆ. ಕನಕಾಂಬರ, ದುಂಡು ಮಲ್ಲಿಗೆ ಸೇರಿ ವಿವಿಧ ಹೂವುಗಳ ಬೆಲೆ ಏರಿಕೆಯಾಗಿದೆ.

ಬೆಂಗಳೂರು, ಆಗಸ್ಟ್ 21: ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜಧಾನಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕೆ.ಆರ್.ಮಾರ್ಕೆಟ್‌ನಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ಸಾವಿರಾರು ಬೆಂಗಳೂರಿಗರು ಹೂವು, ಹಣ್ಣು ಮತ್ತು ಪೂಜಾ ಸಾಮಾಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗೆ ಆಗಮಿಸಿದ್ದಾರೆ.

ಕಳೆದ ವರ್ಷಗಳಲ್ಲಿ ಹಬ್ಬಗಳ ಸಂದರ್ಭದಲ್ಲಿ ಕೆ.ಆರ್.ಮಾರ್ಕೆಟ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿ ಆಂಬುಲೆನ್ಸ್‌ಗಳಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡಿರುವ ಪೊಲೀಸರು, ಈ ಬಾರಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ರಸ್ತೆಯ ಮಧ್ಯಭಾಗದಲ್ಲಿ ವ್ಯಾಪಾರ ಮಾಡಲು ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಕೆ.ಆರ್.ಮಾರ್ಕೆಟ್‌ನಿಂದ ಟೌನ್ ಹಾಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸ್ಪಷ್ಟವಾಗಿ ಇಡಲಾಗಿದೆ. ಆದರೆ, ಮೈಸೂರು ಬ್ಯಾಂಕ್ ಸರ್ಕಲ್‌ಗೆ ಸಾಗುವ ಅವೆನ್ಯೂ ರಸ್ತೆಯಲ್ಲಿ ವ್ಯಾಪಾರ ಮುಂದುವರಿದಿದೆ.

ಕೆ.ಆರ್.ಮಾರ್ಕೆಟ್‌ನಲ್ಲಿ ಸಾಮಾನ್ಯವಾಗಿ ಅಗ್ಗದ ದರದಲ್ಲಿ ಮತ್ತು ವಿವಿಧ ರೀತಿಯ ಹೂವುಗಳು ಲಭ್ಯವಿರುವುದರಿಂದ ಜನರು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಕನಕಾಂಬರ ಪ್ರತಿ ಕೆ.ಜಿ.ಗೆ 5,000 ರೂಪಾಯಿ, ದುಂಡು ಮಲ್ಲಿಗೆ ಪ್ರತಿ ಕೆ.ಜಿ.ಗೆ 2,000 ರೂಪಾಯಿಯಂತೆ ಮಾರಾಟವಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us