ಗಣೇಶ ವಿಸರ್ಜನೆ ವೇಳೆ ಅವಘಡ: ವಿದ್ಯುತ್ ತಂತಿ ಮೇಲೆತ್ತುವಾಗ ಶಾಕ್ ಬಡಿದು ಯುವಕ ಸಾವು
ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೋಲಿನಿಂದ ವಿದ್ಯುತ್ ತಂತಿ ಮೇಲೆತ್ತುವಾಗ ವಿದ್ಯುತ್ ಪ್ರವಹಿಸಿ ಶುಭಂ ಸಂಕಳ ಎಂಬ 21 ವರ್ಷ ವಯಸ್ಸಿನ ಯುವಕ ಮೃತಪಟ್ಟ ಘಟನೆ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ. ನೂರಾರು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವ ದಿನವೇ ದುರಂತ ಸಂಭವಿಸಿದೆ.
ವಿಜಯಪುರ, ಸೆಪ್ಟೆಂಬರ್ 3: ವಿಜಯಪುರ ನಗರದ ಗಾಂಧಿಚೌಕ್ ವೃತ್ತದ ಬಳಿಯ ಟಾಂಗಾ ಸ್ಟ್ಯಾಂಡ್ ಬಳಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ವಿದ್ಯುತ್ ಶಾಕ್ ಬಡಿದು ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಗಣೇಶನ ಮೂರ್ತಿ ಸಾಗಲು ಕೋಲಿನಿಂದ ವಿದ್ಯುತ್ ತಂತಿ ಮೇಲೆತ್ತುವ ವೇಳೆ ವಿದ್ಯುತ್ ಪ್ರವಹಿಸಿ ವಿಜಯಪುರ ನಗರದ ಡೋಬಲೆ ಗಲ್ಲಿ ನಿವಾಸಿ ಶುಭಂ ಸಂಕಳ (21) ಮೃತಪಟ್ಟಿದ್ದಾರೆ. ಘಟನೆ ನಡೆದ ಕೂಡಲೇ ಎಲ್ಲ ಗಣೇಶನ ಮೂರ್ತಿಗಳನ್ನು ಕಳುಹಿಸಿದ ಪೊಲೀಸರು, ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ನಿಂತು ಇತರ ಗಣೇಶ ವಿಸರ್ಜನೆ ಮೆರವಣಿಗೆಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ನಗರದಲ್ಲಿ ಏಳನೇ ದಿನ ನೂರಾರು ಗಣೇಶನ ಮೂರ್ತಿಗಳು ವಿಸರ್ಜನೆ ಆಗುತ್ತವೆ. ಸಾರ್ವಜನಿಕ ಮಂಡಳಿಗಳು ಪ್ರತಿಷ್ಟಾಪಿಸಿರುವ ಮೂರ್ತಿಗಳ ವಿಸರ್ಜನೆ ಆಗುತ್ತವೆ.
