ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಲಕ್ಷಾಂತರ ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಹೆಸ್ಕಾಂ ಶಾಕ್

Edited By:

Updated on: Apr 23, 2026 | 8:08 AM

ವಿಜಯಪುರದಲ್ಲಿ 1.47 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಹೆಸ್ಕಾಂ ಅಧಿಕಾರಿಗಳು ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರ ಕಚೇರಿ ಇರುವ ಕಟ್ಟಡದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯ ನಿರ್ಲಕ್ಷ್ಯದಿಂದ ಇದೀಗ ಶಾಸಕರ ಕಚೇರಿ ಕೆಲಸಗಳಿಗೇ ಅಡ್ಡಿಯಾಗಿದೆ. ಸಿಬ್ಬಂದಿ ಕತ್ತಲಲ್ಲೇ ಕೆಲಸ ಮಾಡುವಂತಾಗಿದೆ.

ವಿಜಯಪುರ, ಏಪ್ರಿಲ್ 23: ಸರ್ಕಾರದ ನಿಯಮಗಳು ಎಲ್ಲರಿಗೂ ಒಂದೇ ಎಂಬುದನ್ನು ವಿಜಯಪುರದ ಹೆಸ್ಕಾಂ (HESCOM) ಸಿಬ್ಬಂದಿ ಸಾಬೀತುಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ (PWD) ಸೇರಿದ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಲಾಗಿದೆ. ವಿಶೇಷವೆಂದರೆ, ಇದೇ ಕಟ್ಟಡದಲ್ಲಿ ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರ ಕಚೇರಿಯೂ ಕಾರ್ಯನಿರ್ವಹಿಸುತ್ತಿದೆ.

ಹಿಂದೆ ಪ್ರವಾಸಿ ಮಂದಿರವಾಗಿದ್ದ ಈ ಕಟ್ಟಡವನ್ನು ಪ್ರಸ್ತುತ ಶಾಸಕರ ಕಚೇರಿಯಾಗಿ ಬಳಸಲಾಗುತ್ತಿದೆ. ಆದರೆ, ಕಳೆದ ಒಂದು ವರ್ಷದಿಂದ ಈ ಕಟ್ಟಡದ ವಿದ್ಯುತ್ ಬಿಲ್ ಅನ್ನು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಪಾವತಿಸಿಲ್ಲ. ಒಟ್ಟು 1.47 ಲಕ್ಷ ರೂಪಾಯಿ ಬಾಕಿ ಉಳಿದಿರುವ ಕಾರಣ, ಹೆಸ್ಕಾಂ ಸಿಬ್ಬಂದಿ ಸಂಪರ್ಕ ಕಡಿತಗೊಳಿಸಿದ್ದಾರೆ.

ವಿದ್ಯುತ್ ಸಂಪರ್ಕ ಕಟ್ ಆದ ಪರಿಣಾಮ ಶಾಸಕರ ಕಚೇರಿಯ ಕೆಲಸ ಕಾರ್ಯಗಳಿಗೆ ಭಾರೀ ತೊಂದರೆಯಾಗಿದೆ. ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದ್ದು, ಶಾಸಕರ ಕಚೇರಿ ಸಿಬ್ಬಂದಿ ಕತ್ತಲಲ್ಲೇ ಕೆಲಸ ಮಾಡುವಂತಾಗಿದೆ. ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಜನಪ್ರತಿನಿಧಿಗಳ ಕಚೇರಿಗೇ ಕತ್ತಲು ಆವರಿಸುವಂತಾಗಿರುವುದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us