ವಿಜಯಪುರ PSI ಜೊತೆಗೆ ವಿವಾಹಿತ ಮಹಿಳೆ ಪರಾರಿ ಕೇಸ್ಗೆ ಟ್ವಿಸ್ಟ್: ಸತ್ಯ ಬಿಚ್ಚಿಟ್ಟ ಸಂತ್ರಸ್ತೆ
PSI ಜೊತೆಗೆ ವಿವಾಹಿತ ಮಹಿಳೆ ಪರಾರಿ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಎಲ್ಲ ಆರೋಪಗಳ ಬಗ್ಗೆ ಟಿವಿ9 ಕನ್ನಡಕ್ಕೆ ಸ್ಪಷ್ಟನೆ ನೀಡಿರುವ ಮಹಿಳೆ ಗಂಡ ಭೀಮಾಶಂಕರನ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕುಡಿದುಬಂದು ಹಲ್ಲೆ ಜೊತೆಗೆ ತನ್ನ ಕೊಲೆಗೂ ಆತ ಯತ್ನಿಸಿದ್ದ. ದೂರು ನೀಡಲು ಹೋದ ವೇಳೆ ಪೊಲೀಸ್ ಅಧಿಕಾರಿ ಮನೋಹರ್ ಕಂಚಗಾರ ಪರಿಚಯವಾಗಿದ್ದರು. ಪರಿಚಯ, ಸ್ನೇಹದಿಂದ ನಾನು ಅವರ ಜೊತೆ ಚಾಟ್ ಮಾಡಿದ್ದೇನೆ. ಈಗ ಅವರ ಜೊತೆ ನನಗೆ ಸಂಪರ್ಕ ಇಲ್ಲ ಎಂದು ಅವರು ತಿಳಿಸಿದ್ದಾರೆ.
ವಿಜಯಪುರ, ಡಿಸೆಂಬರ್ 30: ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದವಳ ಜೊತೆ ಪೊಲೀಸ್ ಅಧಿಕಾರಿ ಸಂಬಂಧ ಆರೋಪ ವಿಚಾರವಾಗಿ ಸ್ವತಃ ಮಹಿಳೆಯೇ ಟವಿ9 ಕನ್ನಡದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭೀಮಾಶಂಕರ ಪತ್ನಿ ಅನುರಾಧಾ ತನಗಾದ ಸಮಸ್ಯೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದು, ಗಂಡನ ಕಿರುಕುಳದಿಂದ ನಾನು ಆತನಿಂದ ದೂರವಾಗಿದ್ದೇನೆ. ಕುಡಿದು ಬಂದು ಹಲ್ಲೆ ಜೊತೆಗೆ ಕೊಲೆಗೂ ಆತ ಯತ್ನಿಸಿದ್ದ. ಹೀಗಾಗಿ ಗಂಡನಿಂದ ದೂರವಾಗಿ 4 ವರ್ಷಗಳು ಕಳೆದಿವೆ ಎಂದು ತಿಳಿಸಿದ್ದಾರೆ.
ಊರಲ್ಲಿದ್ದ ಜಮೀನು ಮಾರಿ ಬೆಂಗಳೂರಿನಲ್ಲಿ ನಿವೇಶನ ಖರೀದಿ ಮಾಡಿದ್ದೆವು. ಆ ಜಾಗ ನನ್ನ ಹಾಗೂ ಪತಿ ಭೀಮಾಶಂಕರ ಹೆಸರಿನಲ್ಲಿದೆ. ಹೀಗಾಗಿ ಅದನ್ನೂ ತನಗೆ ನೀಡುವಂತೆ ಆತ ಪೀಡಿಸಿದ್ದ. ಈ ಬಗ್ಗೆ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಲ್ಲೇ ರಾಜಿ ಪಂಚಾಯಿತಿಯೂ ಆಗಿತ್ತು. ಆ ವೇಳೆ ನನಗೆ ಪೊಲೀಸ್ ಅಧಿಕಾರಿ ಮನೋಹರ್ ಕಂಚಗಾರ ಪರಿಚಯವಾಗಿದ್ದರು. ಬಳಿಕ ನಾನು ಒಬ್ಬಳೇ ಬೆಂಗಳೂರಿಗೆ ಬಂದು ನೆಲೆಸಿದರೂ ಗಂಡನ ಹಿಂಸೆ ತಪ್ಪಿರಲಿಲ್ಲ. ಹೀಗಾಗಿ 2022ರಲ್ಲಿ ರಕ್ಷಣೆಯಾಗಿ ಮನೋಹರ್ ಕಂಚಗಾರ ಸಹಾಯ ಪಡೆದಿದ್ದೆ. ಆ ಪರಿಚಯ, ಸ್ನೇಹದಿಂದ ನಾನು ಅವರ ಜೊತೆ ಚಾಟ್ ಮಾಡಿದ್ದೇನೆ. ಈಗ ಅವರ ಜೊತೆ ನನಗೆ ಸಂಪರ್ಕ ಇಲ್ಲ ಎಂದು ಅನುರಾಧಾ ತಿಳಿಸಿದ್ದಾರೆ. ಜೊತೆಗೆ ಪತಿಯಿಂದ ಹಲ್ಲೆಗೊಳಗಾದ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
