AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೂರು ನೀಡಿದ ವಿವಾಹಿತ ಮಹಿಳೆಯನ್ನೇ ಪಟಾಯಿಸಿದ ‘ಪೋಲಿ’ಸಪ್ಪ: ನ್ಯಾಯಕ್ಕಾಗಿ ಪತಿ ಹೋರಾಟ

ಕೌಟುಂಬಿಕ ಕಲಹದಿಂದ ದೂರು ನೀಡಿದ್ದ ಮಹಿಳೆಯೊಂದಿಗೆ ಓರ್ವ ಪೊಲೀಸ್ ಅಧಿಕಾರಿ ಅನೈತಿಕ ಸಂಬಂಧ ಬೆಳೆಸಿ, ಸಂಸಾರವನ್ನೇ ಹಾಳು ಮಾಡಿರುವಂತಹ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದೂ ಬೆಳಕಿಗೆ ಬಂದಿದೆ. ನ್ಯಾಯ ಒದಗಿಸಬೇಕಾದವರೇ ಕುಟುಂಬ ನಾಶಪಡಿಸಿದ್ದರಿಂದ ಆಕ್ರೋಶ ವ್ಯಕ್ತವಾಗಿದೆ. ವಿಜಯಪುರ ಪೊಲೀಸರು ತನಿಖೆ ನಡೆಸಿದ್ದಾರೆ.

ದೂರು ನೀಡಿದ ವಿವಾಹಿತ ಮಹಿಳೆಯನ್ನೇ ಪಟಾಯಿಸಿದ ‘ಪೋಲಿ’ಸಪ್ಪ: ನ್ಯಾಯಕ್ಕಾಗಿ ಪತಿ ಹೋರಾಟ
ಅನುರಾಧ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Dec 27, 2025 | 6:42 PM

Share

ವಿಜಯಪುರ, ಡಿಸೆಂಬರ್ 27: ನಾಗರಿಕ ರಕ್ಷಣೆ ಪೊಲೀಸ್ ಇಲಾಖೆ ಕರ್ತವ್ಯ. ಸಾಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾನೂನು ಪಾಲನೆ ಕೂಡ ಸೇರಿದೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಪಾತ್ರ ದೊಡ್ಡದು. ಆದರೆ ಓರ್ವ ಪೊಲೀಸ್ ಅಧಿಕಾರಿಯೇ (Police Officer) ಪುಟ್ಟ ಸಂಸಾರದಲ್ಲಿ ಮಾಡಬಾರದ ಕೆಲಸ ಮಾಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾಹಿತ ಮಹಿಳೆಯ ಸಂಸಾರ ಹಾಳು ಮಾಡಿರುವ ಆರೋಪ ಕೇಳಿಬಂದಿದೆ.

ನಡೆದದ್ದೇನು?

ಭೀಮಾಶಂಕರ ಹೋಳ್ಕರ ಎಂಬುವವರದು ಪುಟ್ಟ ಸಂಸಾರ. ತಾಯಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳು. ತಾನಾಯ್ತು, ತನ್ನ ಕೆಲಸವಾಯ್ತು ಎಂದುಕೊಂಡಿದ್ದರು. ಇದೀಗ ಸಂಸಾರದ ಸಮಸ್ಯೆಯಿಂದ ದಿಕ್ಕೆಟ್ಟು ಹೋಗಿದ್ದಾರೆ. ತನ್ನ ಸಂಸಾರ ಸಮಸ್ಯೆಗೆ ಓರ್ವ ಪೊಲೀಸ್ ಅಧಿಕಾರಿಯೇ ಕಾರಣವೆಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಪುಂಸಕ, ಗಂಡಸೇ ಅಲ್ಲ: ಹೆಂಡ್ತಿ ಕುಟುಂಬಸ್ಥರ ಆರೋಪ, ಮನನೊಂದು ಪತಿ ಸಾವಿಗೆ ಶರಣು

ಕಳೆದ 10 ವರ್ಷಗಳ ಹಿಂದೆ ಭೀಮಾಶಂಕರ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಅನುರಾಧ ಜೊತೆಗೆ ಮದುವೆಯಾಗಿತ್ತು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ತಂದೆಯನ್ನು ಕಳೆದುಕೊಂಡಿರುವ ಭೀಮಾಶಂಕರ, ತಾಯಿ, ಪತ್ನಿ ಮತ್ತು ಮಕ್ಕಳ ಜೊತೆಗೆ ವಾಸವಿದ್ದರು. ಮದುವೆಯಾದ ಐದು ವರ್ಷಗಳ ಬಳಿಕ ಗಂಡ-ಹೆಂಡತಿ ಮಧ್ಯೆ ಜಗಳ ಹಿನ್ನೆಲೆ ಅನುರಾಧಾ ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ವೇಳೆ ವಿಚಾರಣೆ ನೆಪದಲ್ಲಿ ಆಲಮೇಲ ಠಾಣೆಯ ಎಎಸ್ಐ ಆಗಿದ್ದ ಮನೋಹರ ಕಂಚಗಾರ ಅನುರಾಧ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ಇದೇ ನೆಪದಲ್ಲಿ ಅನುರಾಧ ಹಾಗೂ ಪೊಲೀಸ್ ಅಧಿಕಾರಿ ಮನೋಹರ್ ಮಧ್ಯೆ ಮಾತಿನ ಸಲುಗೆ ಮುಂದೆ ಅನೈತಿಕ ಸಂಬಂಧಕ್ಕೆ ತಿರುಗಿತ್ತಂತೆ. ಬಳಿಕ 2023ರಲ್ಲಿ ಭೀಮಾಶಂಕರ ಪತ್ನಿ ಮಕ್ಕಳ ಸಮೇತ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದರಂತೆ. ಜೊತೆಗೆ ಪಿತ್ರಾರ್ಜಿ ಆಸ್ತಿ ಮಾರಾಟ ಮಾಡಿದ ಹಣವದಲ್ಲಿ ಬೆಂಗಳೂರಿನಲ್ಲಿ ಒಂದು ಮನೆಯನ್ನು ತನ್ನ ಹಾಗೂ ಪತ್ನಿ ಅನುರಾಧ ಹೆಸರಿನಲ್ಲಿ ಖರೀದಿ ಮಾಡಿದ್ದರು.

ಬೆಂಗಳೂರಿನಲ್ಲಿದ್ದರೂ ಇವರ ಸಂಸಾರದಲ್ಲಿ ಸಾಮರಸ್ಯ ಇರಲಿಲ್ಲ. ಸಣ್ಣ ಪುಟ್ಟ ವಿಷಯಕ್ಕೂ ಕುಂಬಳಗೋಡು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದು ಅನುರಾಧಗೆ ಕಾಮನ್ ಆಗಿತ್ತು. ಇದೆಲ್ಲದರ ಹಿಂದೆ ಪೊಲೀಸ್ ಅಧಿಕಾರಿ ಮನೋಹರ್ ಕಂಚಗಾರ ಇದ್ದಾರೆಂಬ ವಿಚಾರ ಭೀಮಾಶಂಕರಗೆ ಗೊತ್ತಾಗಿದೆ. ಪತ್ನಿ ಹಾಗೂ ಪೊಲೀಸ್ ಅಧಿಕಾರಿ ನಡೆಸಿದ ಮಾತುಕತೆ ವಾಟ್ಸ್ ಆ್ಯಪ್ ಚಾಟಿಂಗ್ ಎಲ್ಲವು ಸಿಕ್ಕಿದ್ದು ಪತ್ನಿಯ ಪರಸಂಗ ಹಾಗೂ ಪೊಲೀಸ್ ಅಧಿಕಾರಿಯ ಅನೈತಿಕ ಸಂಬಂಧ ಬಯಲಾಗಿದೆ.

ಮಕ್ಕಳಿಗೆ ಹಿಂಸೆ

ಯಾವಾಗ ಪತ್ನಿ ಅನುರಾಧ ಹಾಗೂ ಪೊಲೀಸ್ ಅಧಿಕಾರಿಯ ಅನೈತಿಕ ಸಂಬಂಧ ಭೀಮಾಶಂಕರಗೆ ಗೊತ್ತಾಯಿತೋ ಆಗ ಇಬ್ಬರು ಮಕ್ಕಳನ್ನು ಆಕೆಯ ಬಳಿಯೇ ಬಿಟ್ಟು ತನ್ನೂರಿಗೆ ಬಂದಿದ್ದ. ಕೆಲ ದಿನಗಳ ಬಳಿಕ ಭೀಮಾಶಂಕರ ಪುತ್ರ ಬೇರೆಯವರ ಮೊಬೈಲ್​ನಿಂದ ಕಾಲ್ ಮಾಡಿ ತನ್ನನ್ನು ಕರೆದುಕೊಂಡು ಹೋಗು. ಅಮ್ಮನ ಬಳಿ ಓರ್ವ ವ್ಯಕ್ತಿ ಬರುತ್ತಾನೆ. ಆತನಿಗೆ ನಾನು ತಂದೆ ಎಂದು ಕರೆಯಬೇಕೆಂದು ಅಮ್ಮ ಹೇಳುತ್ತಾರೆ. ನನ್ನ ತಂದೆ ಭೀಮಾಶಂಕರ ಎಂದು ಹೇಳಿದ್ದಕ್ಕೆ ಕೈಯನ್ನು ಬೂಟಿನಿಂದ ತುಳಿದು ಹಿಂಸೆ ಕೊಟ್ಟಿದ್ದಾರೆ. ಮೈಗೆ ಬರೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಅನೈತಿಕ ಸಂಬಂಧ ಒಪ್ಪಿಕೊಂಡ ಅನುರಾಧ 

ಇದರಿಂದ ನೊಂದ ಭೀಮಾಶಂಕರ ಬೆಂಗಳೂರಿಗೆ ತೆರಳಿ ತನ್ನ ಅಪ್ರಾಪ್ತ ಮಗನನ್ನು ಕುಂಬಳಗೋಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾನೆ. ಪೊಲೀಸ್ ಅಧಿಕಾರಿಗಳು ಭೀಮಾಶಂಕರ ಹಾಗೂ ಅನುರಾಧ ಇಬ್ಬರ ಕೌನ್ಸಲಿಂಗ್ ಮಾಡಿದಾಗ ತಾನು ಪೊಲೀಸ್ ಅಧಿಕಾರಿ ಮನೋಹರ್ ಕೆಂಚಗಾರ ಜೊತೆ ಇರುತ್ತೇನೆ. ಅವರ ಹಾಗೂ ನನ್ನ ಮಧ್ಯೆ ಸಂಬಂಧವಿದೆ ಎಂದು ಒಪ್ಪಿಕೊಂಡಿದ್ದಾಳಂತೆ. ಆಕೆಯೇ ಸಂಬಂಧ ಒಪ್ಪಿಕೊಂಡು ಪೊಲೀಸ್ ಅಧಿಕಾರಿ ಮನೋಹರ್ ಜೊತೆಗೆ ಇರುತ್ತೇನೆಂದು ಹೇಳಿದ್ದಕ್ಕೆ ಭೀಮಾಶಂಕರ ತನ್ನ ಮಗನನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ. ಈ ಘಟನೆ ಭೀಮಾಶಂಕರ ಹಾಗೂ ಆತನ ತಾಯಿಗೆ ಆಘಾತ ತಂದಿದೆ.

ಇದನ್ನೂ ಓದಿ: ನವ ವಿವಾಹಿತೆ ಆತ್ಮಹತ್ಯೆ ಕೇಸ್: ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ! ಗಾನವಿ ಅಮ್ಮ ನೋವಿನ ಮಾತು

ಸದ್ಯ ಪತ್ನಿ ಅನುರಾಧ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿರುವ ಹಿಂದೆ ಪೊಲೀಸ್ ಅಧಿಕಾರಿ ಮನೋಹರ್ ಕಂಚಗಾರ ಕೈವಾಡವಿದೆ. ಆಲಮೇಲದಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗೆ ಪ್ರಮೋಷನ್ ಆಗಿದ್ದು ಪಿಎಸ್ಐ ಆಗಿ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ಧಾರೆ.

ಇನ್ನು ಬಸವನಬಾಗೇವಾಡಿ ಪೊಲೀಸ್ ಠಾಣೆಗೂ ಒಂದೂವರೆ ತಿಂಗಳಿನಿಂದ ಪಿಎಸ್ಐ ಮನೋಹರ್ ಕಂಚಗಾರ ಸೇವೆಗೆ ಹಾಜರಾಗಿಲ್ಲ. ಇಡೀ ಘಟನೆ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಯ ನೀಡಬೇಕಾಗಿರುವ ಪೊಲೀಸ್ ಅಧಿಕಾರಿಯೇ ಅನ್ಯಾಯ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.