ನವ ವಿವಾಹಿತೆ ಆತ್ಮಹತ್ಯೆ ಕೇಸ್: ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ! ಗಾನವಿ ಅಮ್ಮ ನೋವಿನ ಮಾತು
ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಆತ್ಮಹತ್ಯೆ ಬೆನ್ನಲ್ಲೇ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದುರಂತದ ಕುರಿತು ಗಾನವಿ ತಾಯಿ ಕಣ್ಣೀರು ಹಾಕಿದ್ದು, ಅತ್ತೆ ತನ್ನ ಮಗಳನ್ನು ಪತಿಯ ಪಕ್ಕದಲ್ಲಿ ಕೂರಿಸಲು ಬಿಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಮಗಳು ಪ್ರೀತಿಗಾಗಿ ಹಾತೊರೆದಿದ್ದು, ಅಪವಾದಗಳಿಗೆ ಹೆದರಿ ವಿಚ್ಛೇದನಕ್ಕೆ ಮನಸ್ಸು ಮಾಡಿರಲಿಲ್ಲ ಎಂದು ತಾಯಿ ಆಳಲು ತೋಡಿಕೊಂಡಿದ್ದಾರೆ.
ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನಲ್ಲಿ ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆತಿದೆ. ಗಾನವಿ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದು, ಆತನ ತಾಯಿ ಸಹ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗಾನವಿ ತಾಯಿ ಮಾತನಾಡಿದ್ದು, ಆಕೆಗೆ ಗಂಡ ಮನೆಯಲ್ಲಿ ಬಹಳ ಹಿಂಸೆ ನೀಡಲಾಗುತ್ತಿತ್ತು ಎಂದಿದ್ದಾರೆ.
ಮದುವೆಯಾದ ಒಂದೂವರೆ ತಿಂಗಳಾದರೂ ಗಾನವಿಗೆ ಪತಿಯಿಂದ ಪ್ರೀತಿ ಸಿಕ್ಕಿರಲಿಲ್ಲ. ಅತ್ತೆ ತನ್ನ ಮಗಳನ್ನು ಪತಿಯ ಪಕ್ಕದಲ್ಲಿ ಕುಳಿತುಕೊಳ್ಳಲೂ ಬಿಡುತ್ತಿರಲಿಲ್ಲ. ಸರಿಯಾಗಿ ಊಟ ನೀಡದೆ ಸತಾಯಿಸುತ್ತಿದ್ದರು. ಆದರೂ ಗಾನವಿ ಗಂಡನ ಪ್ರೀತಿಗಾಗಿ ಗಾನವಿ ಹಾತೊರೆಯುತ್ತಿದ್ದಳು. ‘ನನ್ನನ್ನು ವಾಪಸ್ ಕಳುಹಿಸಬೇಡಿ, ನಾನು ಇಲ್ಲೇ ಬದುಕುತ್ತೇನೆ, ನನಗೆ ಪ್ರೀತಿ ಕೊಡಿ ಸಾಕು’ ಎಂದು ಗಾನವಿ ತನ್ನ ಅತ್ತೆಯನ್ನು ಬೇಡಿಕೊಂಡಿದ್ದಳು. ಗ್ರಾಮದಲ್ಲಿ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ವಿಚ್ಛೇದನಕ್ಕೆ ಹಿಂಜರಿಯುತ್ತಿದ್ದಳು ಎಂದು ತಾಯಿ ಹೇಳಿದ್ದಾರೆ. ಗಾನವಿ ಗಂಡ ಸೂರಜ್ ಆತ್ಮಹತ್ಯೆಗೆ ಆತ ಆಕೆಗೆ ಮಾಡಿದ ಮೋಸದ ತಪ್ಪಿತಸ್ಥ ಭಾವನೆಯೇ ಕಾರಣ ಎಂದು ಗಾನವಿ ತಾಯಿ ಆರೋಪಿಸಿದ್ದಾರೆ.
ವಿವರಗಳಿಗೆ ಓದಿ: ನವವಿವಾಹಿತೆ ಸೂಸೈಡ್ ಕೇಸ್ಗೆ ಬಿಗ್ ಟ್ವಿಸ್ಟ್: ನಾಗಪುರದಲ್ಲಿ ಆತ್ಮಹತ್ಯೆಗೆ ಶರಣಾದ ಗಾನವಿ ಪತಿ ಸೂರಜ್!
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

