ನೆಲಮಂಗಲ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಚೌಧುರಿಯನ್ನು ಬಲಿಪಶು ಮಾಡಲಾಗಿದೆಯೇ?
ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವಾಗಲೇ ತನ್ನ ಏಳ್ಗೆಯನ್ನು ಚಿವುಟಿ ಹಾಕಿದ್ದಾರೆ ಎಂದು ಜಗದೀಶ್ ಚೌಧುರಿ ಹೇಳುತ್ತಾರೆ. ಪಕ್ಷಕ್ಕಾಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ತನ್ನನ್ನು ಉಚ್ಛಾಟಿಸಲಾಗಿದೆ ಎನ್ನುವ ಅವರು ಪಕ್ಷದಿಂದ ಉಚ್ಛಾಟಿಸಲಾಗಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಹೇಳುತ್ತಾರೆ! ಬಿಜೆಪಿಯಲ್ಲಿ ಹಾಗಾಗುತ್ತದೆಯೇ?
ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಸಂಸತ್ತಿಗೆ ಅಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜುಲೈ 7ರಂದು ನೆಲಮಂಗಲದಲ್ಲಿ ಒಂದು ಅಭಿನಂದನಾ ಕೂಟ ಏರ್ಪಡಿಸಲಾಗಿತ್ತು. ಆದರೆ ಸಮಾರಂಭದ ನಂತರ ಅದರಲ್ಲಿ ಪಾಲ್ಗೊಂಡ ಜನರಿಗೆ ಮದ್ಯದ ಬಾಟಲಿಗಳನ್ನು ಹಂಚಿದ್ದು ಕೆಮೆರಾದಲ್ಲಿ ಸೆರೆಯಾಗಿ ಆ ವಿಡಿಯೋ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೆಲಮಂಗಲ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಜಗದೀಶ್ ಚೌಧುರಿಯನ್ನು 6-ವರ್ಷ ಅವಧಿಗೆ ಪಕ್ಷದಿಂದ ಉಚ್ಛಾಟಿಸಿದ್ದಾರೆ. ಜಗದೀಶ್ ರನ್ನು ಉಚ್ಛಾಟಿಸಲಾಗಿದೆಯೋ ಅಥವಾ ಬಲಿಪಶು ಮಾಡಲಾಗಿದೆಯೋ ಅಂತ ಸ್ಥಳೀಯ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಇಂದು ಪಟ್ಟಣದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಜಗದೀಶ್ ಮೊದಲಿಗೆ ನಡೆದ ಅನಾಹುತದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುತ್ತಾರಾದರೂ ನಂತರ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಾರೆ. ರಾಜ್ಯಾಧ್ಯಕ್ಷರ ನಿರ್ಣಯವನ್ನು ಸ್ವಾಗತಿಸುತ್ತೇನೆ ಎನ್ನುವ ಜಗದೀಶ್ ತನ್ನ ಪರವಾಗಿ ಪಕ್ಷದ ನಾಯಕರ್ಯಾರೂ ನಿಲ್ಲದೆ ಹೋಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂಸದ ಡಾ.ಕೆ ಸುಧಾಕರ್ಗೆ ನೆಲಮಂಗಲದಲ್ಲಿ ಅಭಿನಂದನಾ ಕಾರ್ಯಕ್ರಮ; ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ