18 ಸಿಕ್ಸ್, 181 ರನ್… ಕೆಸಿಎಲ್ನಲ್ಲಿ ವಿಷ್ಣು ವಿನೋದ್ ಆರ್ಭಟ
Vishnu Vinod: ವಿಶೇಷ ಎಂದರೆ ಕಳೆದ ಎರಡು ಪಂದ್ಯಗಳಿಂದ ವಿಷ್ಣು ವಿನೋದ್ ಸಿಡಿಸಿರುವ ಸಿಕ್ಸ್ಗಳ ಸಂಖ್ಯೆ ಬರೋಬ್ಬರಿ 18. ಅಲ್ಲದೆ ಬ್ಯಾಕ್ ಟು ಬ್ಯಾಕ್ ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ಒಟ್ಟು 181 ರನ್ ಕಲೆಹಾಕಿದ್ದಾರೆ. ಈ ಮೂಲಕ ಕೇರಳ ಪ್ರೀಮಿಯರ್ ಲೀಗ್ನಲ್ಲಿ ವಿಷ್ಣು ವಿನೋದ್ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ಕೇರಳ ಕ್ರಿಕೆಟ್ ಲೀಗ್ನಲ್ಲಿ ವಿಷ್ಣು ವಿನೋದ್ ಆರ್ಭಟ ಮುಂದುವರೆದಿದೆ. ಕೊಚ್ಚಿ ಬ್ಲೂ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ಗಳೊಂದಿಗೆ 94 ರನ್ ಬಾರಿಸಿದ್ದ ವಿನೋದ್ ಇದೀಗ 9ನೇ ಪಂದ್ಯದಲ್ಲೂ ಅಬ್ಬರಿಸಿದ್ದಾರೆ. ತಿರುವನಂತಪುರದ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಲಂ ಸೈಲರ್ಸ್ ಹಾಗೂ ತ್ರಿಶ್ಶೂರ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸಚಿನ್ ಬೇಬಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿ ತ್ರಿಶ್ಶೂರ್ ಟೈಟಾನ್ಸ್ ತಂಡವು 19.5 ಓವರ್ಗಳಲ್ಲಿ 144 ರನ್ಗಳಿಸಿ ಆಲೌಟ್ ಆಯಿತು.
145 ರನ್ಗಳ ಸುಲಭ ಗುರಿ ಬೆನ್ನತ್ತಿದ ಕೊಲ್ಲಂ ಸೈಲರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವಿಷ್ಣು ವಿನೋದ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಹೊಡಿಬಡಿ ಆಟಕ್ಕೆ ಒತ್ತು ನೀಡಿದ ವಿಷ್ಣು 38 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 86 ರನ್ ಬಾರಿಸಿದರು.
ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಕೊಲ್ಲಂ ಸೈಲರ್ಸ್ ತಂಡವು 14.1 ಓವರ್ಗಳಲ್ಲಿ 150 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಬ್ಯಾಟಿಂಗ್ ಪರಾಕ್ರಮ ಮೆರೆದ ವಿಷ್ಣು ವಿನೋದ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ವಿಶೇಷ ಎಂದರೆ ಕಳೆದ ಎರಡು ಪಂದ್ಯಗಳಿಂದ ವಿಷ್ಣು ವಿನೋದ್ ಸಿಡಿಸಿರುವ ಸಿಕ್ಸ್ಗಳ ಸಂಖ್ಯೆ ಬರೋಬ್ಬರಿ 18. ಅಲ್ಲದೆ ಬ್ಯಾಕ್ ಟು ಬ್ಯಾಕ್ ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ಒಟ್ಟು 181 ರನ್ ಕಲೆಹಾಕಿದ್ದಾರೆ. ಈ ಮೂಲಕ ಕೇರಳ ಪ್ರೀಮಿಯರ್ ಲೀಗ್ನಲ್ಲಿ ವಿಷ್ಣು ವಿನೋದ್ ಹೊಸ ಸಂಚಲನ ಸೃಷ್ಟಿಸಿದ್ದಾರೆ.

