ಸಭಾಪತಿ ಸ್ಥಾನಕ್ಕೆ ಧಕ್ಕೆ ಬರ್ತಿದೆ ಎಂದು UT ಖಾದರ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಟಾಂಗ್
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭಾಪತಿ ಯು.ಟಿ. ಖಾದರ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಸಭಾಪತಿ ಸ್ಥಾನದ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕಾಗೇರಿ, ತನಿಖೆಯಿಂದ ಖಾದರ್ ಆರೋಪಮುಕ್ತರಾಗಲಿ ಮತ್ತು ಸ್ಥಾನದ ಗೌರವ ಮರುಸ್ಥಾಪಿತವಾಗಲಿ ಎಂದು ಆಶಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 31: ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧವೇ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ವಿಧಾನಸಭೆ ಉಪಕರಣಗಳ ಖರೀದಿ ಹಾಗೂ 4.5 ಕೋಟಿ ರೂ. ಪುಸ್ತಕ ಮೇಳದ ವೆಚ್ಚದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಎದುರಿಸುತ್ತಿರುವಾಗಲೇ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಸ್ತುತ ಸಭಾಪತಿ ಯು.ಟಿ. ಖಾದರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತೀವ್ರ ನಿಲುವು ವ್ಯಕ್ತಪಡಿಸಿದ್ದಾರೆ.
ಆಡಳಿತ ಸುಧಾರಣೆಯ ನೆಪದಲ್ಲಿ ನಡೆದಿದೆ ಎನ್ನಲಾದ ಹಲವು ಭ್ರಷ್ಟಾಚಾರ ಹಗರಣಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಇವುಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಂವಿಧಾನಬದ್ಧವಾದ ಸಭಾಪತಿ ಸ್ಥಾನದ ಘನತೆ ಮತ್ತು ಗೌರವಕ್ಕೆ ಕುಂದುಂಟಾಗಿದೆ ಎಂದು ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ. ಈ ಪರಿಸ್ಥಿತಿಯಿಂದ ಹೊರಬರಲು, ಹಾಲಿ ನ್ಯಾಯಾಧೀಶರಿಂದ ಸಂಪೂರ್ಣ ತನಿಖೆಯಾಗಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
