ಉಕ್ರೇನ್​ನಲ್ಲಿ ಯುದ್ಧ ಆರಂಭಗೊಂಡ ಕಾರಣ ಅಗಲುತ್ತಿರುವ ಈ ಪ್ರೇಮಿಗಳ ಪುನರ್ಮಿಲನ ಬೇಗ ಆಗಲಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 24, 2022 | 7:43 PM

ಪ್ರಿಯಕರನನ್ನು ಇಂಥ ಸ್ಥಳದಲ್ಲಿ ಬಿಟ್ಟು ಹೋಗುತ್ತಿರುವ ಯುವತಿಯ ಎದೆಯಲ್ಲಿ ಬಾಂಬ್ ಸಿಡಿಯುವ ಸದ್ದು ಅದರಿಂದ ಏಳುವ ಬೆಂಕಿ, ಹೊಗೆ ಮತ್ತು ಧೂಳು ಎಂಥ ತಳಮಳ ಸೃಷ್ಟಿಸುತ್ತಿರಬಹುದು ಅಂತ ಯೋಚಿಸಿ ನೋಡಿ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿಯಾಗಿದೆ. ಅಲ್ಲಿನ ಜನ ಇನ್ನಿಲ್ಲದಷ್ಟು ಭಯಗ್ರಸ್ತರಾಗಿದ್ದಾರೆ. ಉಕ್ರೇನ್ (Ukraine) ಮತ್ತು ರಷ್ಯಾದ (Russia) ಗಡಿಭಾಗದಲ್ಲಿ ವಾಸವಾಗಿರುವ ಜನ ಸುರಕ್ಷಿತ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಈ ಗಡಿಪ್ರದೇಶದಿಂದ ನಮಗೊಂದು ವಿಡಿಯೋ ಸಿಕ್ಕಿದೆ. ಯುದ್ಧ ಆರಂಭಗೊಂಡಿರುವುದರಿಂದ ಒಬ್ಬ ಯುವಕ ತನ್ನ ಪ್ರೇಯಸಿಯನ್ನು (love) ಒಂದು ಸುರಕ್ಷಿತ ಪ್ರದೇಶಕ್ಕೆ ಅಥವಾ ಅವಳ ಊರಿಗೆ ಕಳಿಸುತ್ತಿದ್ದಾನೆ. ಇಂಥ ಅನಿರೀಕ್ಷಿತ ಅಗಲಿಕೆ (unexpected parting) ಅವರಿಬ್ಬರಲ್ಲಿ ಅತೀವ ವೇದನೆ ಉಂಟುಮಾಡಿದೆ. ಆದರೆ ಬೇರ್ಪಡುವಿಕೆ ಅನಿವಾರ್ಯ. ಯುದ್ಧ ಬೇಗ ಕೊನೆಗೊಂಡು ತಾವಿಬ್ಬರೂ ಪುನಃ ಒಂದೇ ಕಡೆ ನೆಲೆಸುವಂತಾಗಲಿ ಅಂತ ಇಬ್ಬರೂ ಮೌನವಾಗಿ ಪ್ರಾರ್ಥಿಸುತ್ತಿರಬಹುದು. ಭಾರದ ಮನಸ್ಸಿನಿಂದ ಯುವತಿ ಬಸ್ಸೊಂದರಲ್ಲಿ ಕುಳಿತು ತನ್ನಿನಯನಿಗೆ ವಿದಾಯ ಹೇಳುತ್ತಿದ್ದಾಳೆ. ಇದನ್ನು ನೋಡುತ್ತಿದ್ದರೆ ನಮ್ಮ ಮನಸ್ಸುಗಳು ಸಹ ಭಾರಗೊಳ್ಳುತ್ತವೆ.

ಅವರ ನಡುವಿರುವ ಅಗಾಧ ಪ್ರೀತಿ 15-20 ಸೆಕೆಂಡುಗಳ ಫುಟೇಜ್ ನಲ್ಲಿ ನಮಗೆ ಗೊತ್ತಾಗಿಬಿಡುತ್ತದೆ. ಬಸ್ಸಿನಲ್ಲಿ ಯುವತಿ ಕೂತಿರುವ ಸೀಟಿನ ಕಿಟಕಿ ಗ್ಲಾಸನ್ನು ಹಬೆ ಆವರಿಸಿದೆ. ಕೆಳಗೆ ನಿಂತಿರುವ ಅವಳ ಪ್ರಿಯಕರ ತನ್ನ ಬೆರಳಿನಿಂದ ಪ್ರೀತಿಯ ಗುರುತು ಮಾಡಿ ಐ ಲವ್ ಯೂ ಅಂತ ಹೇಳುತ್ತಿದ್ದಾನೆ. ಒಳಗಿನಿಂದ ಯುವತಿ ಸಹ ಅದೇ ಗುರುತನ್ನು ಮಾಡಿ ಐ ಲವ್ ಯು ಟೂ ಅನ್ನುವ ಭಾವನೆ ವ್ಯಕ್ತಪಡಿಸುತ್ತಾಳೆ.

ಅದಾದ ಮೇಲೆ ಯುವತಿ ಕಿಟಕಿಯ ಮೇಲೆ ತನ್ನ ಅಂಗೈ ಇಡುತ್ತಾಳೆ. ಅವಳ ಪ್ರಿಯಕರ ಅವಳ ಅಂಗೈಯನ್ನು ಸರಿಯಾಗಿ ಕವರ್ ಆಗುವ ಹಾಗೆ ತನ್ನ ಅಂಗೈ ಇಡುತ್ತಾನೆ. ಅವರು ಪರಸ್ಪರ ವ್ಯಕ್ತಪಡಿಸುತ್ತಿರುವ ಪ್ರೀತಿ ನೋಡಗರನ್ನೂ ಭಾವಪರವಶಗೊಳಿಸುತ್ತದೆ. ಬಸ್ ನಿಂತಿರುವ ಅನತಿ ದೂರದಲ್ಲೇ ಬಾಂಬ್ ಮತ್ತು ಗ್ರೆನೇಡ್ಗಳು ಸಿಡಿಯುತ್ತಿರುವುದು ಸಹ ನಮಗೆ ವಿಡಿಯೋನಲ್ಲಿ ಕಾಣುತ್ತಿದೆ.

ಪ್ರಿಯಕರನನ್ನು ಇಂಥ ಸ್ಥಳದಲ್ಲಿ ಬಿಟ್ಟು ಹೋಗುತ್ತಿರುವ ಯುವತಿಯ ಎದೆಯಲ್ಲಿ ಬಾಂಬ್ ಸಿಡಿಯುವ ಸದ್ದು ಅದರಿಂದ ಏಳುವ ಬೆಂಕಿ, ಹೊಗೆ ಮತ್ತು ಧೂಳು ಎಂಥ ತಳಮಳ ಸೃಷ್ಟಿಸುತ್ತಿರಬಹುದು ಅಂತ ಯೋಚಿಸಿ ನೋಡಿ.

ಪ್ರೇಮಿಗಳ ಈ ಆಗಲಿಕೆ ಕೇವಲ ತಾತ್ಕಾಲಿಕವಾಗಲಿ. ಯುದ್ಧ ಆರಂಭಿಸಿರುವ ಪ್ರಭೃತಿಗಳಿಗೆ ಕೂಡಲೇ ಜ್ಞಾನೋದಯವಾಗಿ ಇದು ಸರಿಯಲ್ಲ ಅಂತ ಮನವರಿಕೆಯಾಗಿ ಆದಷ್ಟು ಬೇಗ ಈ ಪ್ರೇಮಿಗಳ ಪುನರ್ಮಿಲನ ಸಂಭವಿಸಲಿ ಅಂತ ಹಾರೈಸೋಣ.

ನಮ್ಮ ಹಾಗೆ ನಿಮಗೂ, ‘ಲಂಬೀ ಜುದಾಯೀ ಚಾರ್ ದಿನೋಂಕಾ…’ ಹಾಡು ನೆನಪಿಗೆ ಬರುತ್ತಿರಬಹುದು.

ಇದನ್ನೂ ಓದಿ:   ಉಕ್ರೇನ್​ನಲ್ಲಿ ಸಿಲುಕಿಕೊಂಡ ಗದಗನ ವೈದ್ಯಕೀಯ ವಿದ್ಯಾರ್ಥಿ; ಮಗನನ್ನು ಸುರಕ್ಷಿತವಾಗಿ ಕರೆತರುವಂತೆ ಸರ್ಕಾರಕ್ಕೆ ಪೋಷಕರ ಮನವಿ