2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ತಮ್ಮ ಅಧಿಕಾರಾವಧಿ ಉದಾಹರಣೆ ಕೊಟ್ಟ ಭೋಜೇಗೌಡ

Updated on: Aug 13, 2025 | 4:01 PM

ಕರ್ನಾಟಕದಲ್ಲೂ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಗಳಿಗೆ ಹಾಕಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಈ ಸಂಬಂಧ ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದು, ನಾಯಿಗಳ ನಿಯಂತ್ರಣ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಚರ್ಚೆಯಾಗಿದೆ. ಜೆಡಿಎಸ್ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳ ಸಮಸ್ಯೆ ಇದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕೆಂದು ಪ್ರಸ್ತಾಪಿಸಿದರು.

ಬೆಂಗಳೂರು, (ಆಗಸ್ಟ್ 13): ಸುಪ್ರೀಂಕೋರ್ಟ್ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಎನ್‌ಸಿಆರ್ ನಗರಗಳಲ್ಲಿ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಹೋಮ್ ಗಳಿಗೆ ಹಾಕುವಂತೆ ಆದೇಶ ನೀಡಿದೆ. ಸುಪ್ರೀಂಕೋರ್ಟ್ ಈ ಆದೇಶಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲ ಶ್ವಾನಪ್ರಿಯರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಈಗ ಕೊಟ್ಟಿರುವ ಆದೇಶ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಆದ್ರೆ, ಇದನ್ನು ದೇಶಾದ್ಯಂತ ವಿಸ್ತರಿಸಬೇಕೆಂಬ ಆಗ್ರಹ ಕೂಡ ಕೇಳಿ ಬರುತ್ತಿದೆ. ಇನ್ನು ನಮ್ಮ ಕರ್ನಾಟಕದಲ್ಲೂ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಗಳಿಗೆ ಹಾಕಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಈ ಸಂಬಂಧ ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದು, ನಾಯಿಗಳ ನಿಯಂತ್ರಣ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಚರ್ಚೆಯಾಗಿದೆ.

ಜೆಡಿಎಸ್ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳ ಸಮಸ್ಯೆ ಇದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕೆಂದು ಪ್ರಸ್ತಾಪಿಸಿದರು. ಬಳಿಕ ನಡೆದ ಪರ ವಿರೋಧದ ಚರ್ಚೆ ವೇಳೆ ಗಂಭೀರಗೊಂಡ ಭೋಜೇಗೌಡ, ನಾಯಿಗಳ ಸ್ಥಿತಿ ಈಗ ಸಂಪೂರ್ಣ ಬದಲಾಗಿದೆ. ಹಿಂದಿನ ಆದೇಶವನ್ನು ಬದಲಿಸಿ ಸುಪ್ರೀಂಕೋರ್ಟ್​ ಗೆ ಸಲ್ಲಿಸಿ. ನಾಯಿಗಳಿಂದ ಶಾಲಾ ಮಕ್ಕಳಿಗೆ, ಜನ ಸಾಮಾನ್ಯರಿಗೆ ಮುಕ್ತಿ ನೀಡಿ. ನಾನು ಚಿಕ್ಕಮಗಳೂರು ನಗರ ಸಭೆ ಅಧ್ಯಕ್ಷನಾಗಿದ್ದಾಗ 2800 ಬೀದಿ ನಾಯಿಗಳಿಗೆ ಮಾಂಸಾಹಾರದಲ್ಲಿ ಔಷಧ ಹಾಕಿ ಸಾಯಿಸಿದ್ದೆವು. ಬಳಿಕ ಅವುಗಳನ್ನು ತೆಂಗಿನ ಮರದ ಬುಡದಲ್ಲಿ ಹೂತುಹಾಕಿದ್ದೆವು ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಹೀಂಖಾನ್, ಪ್ರಾಣಿ ದಯಾಸಂಘದವರು ಬರುತ್ತಾರೆ ಇರಿ ಎಂದು ಭೋಜೇಗೌಡ್ರಿಗೆ ಕಿಚಾಯಿಸಿದರು. ಇದರಿಂದ ಮತ್ತಷ್ಟು ಕೆರಳಿದ ಭೋಜೇಗೌಡ, ಎಲ್ಲಾ ನಾಯಿಗಳನ್ನು ಹಿಡಿದು ಪ್ರಾಣಿ ದಯಾ ಸಂಘದವರ ಮನೆಗಳಿಗೆ ಬಿಡಿ ಎಂದು ಹೇಳಿ ಕುಳಿತುಕೊಂಡರು.