ತೆರಿಗೆ ವಿನಾಯಿತಿ ಕೇಳಲು ಹೋಗಿ ನಟ ವಿಜಯರಂತೆಯೇ ಮದ್ರಾಸ್ ಹೈಕೋರ್ಟ್​ನಿಂದ ಉಗಿಸಿಕೊಂಡ ಧನುಶ್!

ತೆರಿಗೆ ವಿನಾಯಿತಿ ಕೇಳಲು ಹೋಗಿ ನಟ ವಿಜಯರಂತೆಯೇ ಮದ್ರಾಸ್ ಹೈಕೋರ್ಟ್​ನಿಂದ ಉಗಿಸಿಕೊಂಡ ಧನುಶ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 06, 2021 | 5:31 PM

ನಟ ಧನುಶ್ ಮತ್ತು ಅವರ ವಕೀಲ ದುಬಾರಿ ಕಾರಿನ ಮೇಲೆ ವಿನಾಯಿತಿ ಕೇಳಲು ಹೋಗಿ ಗುರುವಾರದಂದು ಮದ್ರಾಸ್ ಹೈಕೋರ್ಟ್ನಿಂದ ಎಕ್ಕಾಮಕ್ಕಾ ಉಗಿಸಿಕೊಂಡಿದ್ದಾರೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ರೂ. 30.33 ಲಕ್ಷ ಪ್ರವೇಶ ತೆರಿಗೆ ಸಂದಾಯ ಮಾಡಬೇಕು ಎಂದು ನ್ಯಾಯಮೂರ್ತಿ ಎಸ್ ಎಮ್ ಸುಬ್ರಮಣಿಯಮ್ ಅವರು ನಟನಿಗೆ ನಿರ್ದೇಶನ ನೀಡಿದ್ದಾರೆ.

ಸೆಲಿಬ್ರಿಟಿ ಸಿನಿಮಾ ನಟರು ಕೋಟಿಗಟ್ಟಲೆ ಹಣ ಸಂಭಾವನೆಯ ರೂಪದಲ್ಲಿ ಪಡೆಯುತ್ತಾರೆ. ಕೋಟಗಳನ್ನು ಚೆಲ್ಲಿ ಐಷಾರಾಮಿ ಬಂಗ್ಲೆಗಳನ್ನು ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ಆದರೆ ತೆರಿಗೆ ಪಾವತಿಸಿ ಸ್ವಾಮಿ ಅಂತ ಸಂಬಂಧಪಟ್ಟ ಇಲಾಖೆಗಳು ಹೇಳಿದಾಗ ಅವರಿಗೆ ಸಂಕಟ ಶುರುವಾಗುತ್ತದೆ. ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ನಾನಾ (ವ್ಯರ್ಥ) ಉಪಾಯಗಳನ್ನು ಮಾಡುತ್ತಾರೆ. ಲಕ್ಷಾಂತರ ಸುರಿದು ತಮ್ಮ ಪರ ವಾದಿಸಲು ವಕೀಲನನ್ನು ಗೊತ್ತು ಮಾಡಿಕೊಳ್ಳುತ್ತಾರೆ. ಅದೇ ದುಡ್ಡು ತೆರಿಗೆ ಇಲಾಖೆಗೆ ಕಟ್ಟಿದರೆ ಸಮಸ್ಯೆಯೇ ತೀರುತ್ತಲ್ಲ ಎಂಬ ಅಲ್ಪ ಜ್ಞಾನವೂ ಅವರಲ್ಲಿ ಇರುವುದಿಲ್ಲ!

ಭಾರತದ ಮೆಗಾ ಸ್ಟಾರ್ ರಜಿನಿಕಾಂತ್ ಅಳಿಯ ಧನುಶ್ ಗೊತ್ತಲ್ಲ? ಈ ಮಹಾನುಭಾವ ಮತ್ತು ಅವರ ವಕೀಲ ದುಬಾರಿ ಕಾರಿನ ಮೇಲೆ ವಿನಾಯಿತಿ ಕೇಳಲು ಹೋಗಿ ಗುರುವಾರದಂದು ಮದ್ರಾಸ್ ಹೈಕೋರ್ಟ್ನಿಂದ ಎಕ್ಕಾಮಕ್ಕಾ ಉಗಿಸಿಕೊಂಡಿದ್ದಾರೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ರೂ. 30.33 ಲಕ್ಷ ಪ್ರವೇಶ ತೆರಿಗೆ ಸಂದಾಯ ಮಾಡಬೇಕು ಎಂದು ನ್ಯಾಯಮೂರ್ತಿ ಎಸ್ ಎಮ್ ಸುಬ್ರಮಣಿಯಮ್ ಅವರು ನಟನಿಗೆ ನಿರ್ದೇಶನ ನೀಡಿದ್ದಾರೆ. ಧನುಶ್ ಅವರಿಗಿಂತ ತುಂಬಾ ಕಡಿಮೆ ಸಂಪಾದನೆ ಮಾಡುವ ಕೊಟ್ಯಾಂತರ ಜನ ಇದ್ದಾರೆ ಮತ್ತು ಅವರೆಲ್ಲ ಪ್ರಮಾಣಿಕವಾಗಿ ತಮ್ಮ ಪಾಲಿನ ತೆರಿಗೆ ಕಟ್ಟುತ್ತಾರೆ. ಅವರ್ಯಾರೂ, ತೆರಿಗೆ ವಿನಾಯಿತಿ ಕೇಳಿ ಕೋರ್ಟಿನ ಮೆಟ್ಟಿಲು ಹತ್ತುವುದಿಲ್ಲ, ಅಂತ ನ್ಯಾಯಮೂರ್ತಿಗಳು ಧನುಶರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ನಿಮ್ಮ ಐಷಾರಾಮಿ ಕಾರುಗಳು ಓಡುವ ರಸ್ತೆಗಳು ತೆರಿಗೆ ಪಾವತಿಸುವವರ ಹಣದಿಂದ ನಿರ್ಮಾಣವಾಗಿವೆ. ನಿಮಗೆ ಗೊತ್ತಾ? ಹಾಲು ಮಾರುವರು ಮತ್ತು ದಿನಗೂಲಿ ಮಾಡಿ ಬದುಕು ನಡೆಸುವವರು ತಾವು ಖರೀದಿಸುವ ಪ್ರತಿ ಒಂದು ಲೀಟರ್ ಪೆಟ್ರೋಲ್ಗೆ ತೆರಿಗೆ ಕಟ್ಟುತ್ತಾರೆ,’ ಎಂದು ನ್ಯಾಯಮೂರ್ತಿಗಳು ನಟನಿಗೆ ಹೇಳಿದರು. ಇದೇ ನ್ಯಾಯಮೂರ್ತಿಗಳು ದುಬಾರಿ ಕಾರಿನ ಮೇಲೆ ತೆರಿಗೆ ವಿನಾಯಿತಿ ಕೇಳಿದ್ದ ತಮಿಳಿನ ಮತ್ತೊಬ್ಬ ಸುಪ್ರಸಿದ್ಧ ನಟ ವಿಜಯ್ರನ್ನು ಸಹ ತರಾಟೆಗೆ ತೆಗೆದುಕೊಂಡಿದ್ದರು.

‘ನಿಮ್ಮ ಉದ್ದೇಶಗಳು ಪ್ರಾಮಾಣಿಕವಾಗಿದ್ದರೆ, 2018 ರಲ್ಲಿ ಸುಪ್ರೀಮ್ ಕೋರ್ಟ್ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದ ಕೂಡಲೇ ತೆರಿಗೆಯನ್ನು ಸಂದಾಯ ಮಾಡಿರುತ್ತಿದ್ದಿರಿ. ಈಗ ಹೈಕೋರ್ಟ್ ಆದೇಶಕ್ಕಾಗಿ ಪ್ರಕರಣವನ್ನು ಪಟ್ಟಿ ಮಾಡಿದ ನಂತರ ಮನವಿಯನ್ನು ಹಿಂಪಡೆಯುವುದಾಗಿ ಹೇಳುತ್ತಿರುವಿರಿ,’ ಎಂದು ನ್ಯಾಯಮೂರ್ತಿಗಳು; ಧನುಶ್ ಅವರ ವಕೀಲ ಮನವಿ ಹಿಂಪಡೆಯುವುದಾಗಿ ಕೋರ್ಟಿಗೆ ಅರಿಕೆ‘ ಮಾಡಿದಾಗ ಹೇಳಿದರು.

ಇದನ್ನೂ ಓದಿ: ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಇದು: ವಿಡಿಯೋ ನೋಡಿ