ಕನ್ನಡದ ಪ್ರಶ್ನೆ ಬಂದಾಗ ಹೋರಾಟ ಮಾಡೇ ಮಾಡುತ್ತೇನೆ ಎಂದರು ಶಿವರಾಜಕುಮಾರ್!
ಸಮಸ್ಯೆ ಎದುರಾದಾಗಲೆಲ್ಲ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾ ಇರಬೇಕು. ನಾವೆಲ್ಲ ಭಾರತೀಯರು, ನಮ್ಮಲ್ಲಿ ಒಗ್ಗಟ್ಟಿರಬೇಕು. ಅದರೆ ಕನ್ನಡದ ಪ್ರಶ್ನೆ ಬಂದಾಗ ನಾವು ಹೋರಾಡಲೇ ಬೇಕು ಎಂದು ಶಿವಣ್ಣ ಹೇಳಿದರು.
‘ಜೇಮ್ಸ್’ (James) ಚಿತ್ರಕ್ಕೆ ಥೇಟರ್ ಗಳ (Theatre) ಕೊರತೆ ಸೃಷ್ಟಿಯಾಗಿರುವ ಪರಿಸ್ಥಿತಿ ತಲೆದೋರಿದೆ. ಕನ್ನಡ ನಾಡಿನಲ್ಲಿರುವ ಚಿತ್ರಮಂದಿರಗಳು ಪರಭಾಷೆಯ ಚಿತ್ರಗಳಿಗೆ ಆದ್ಯತೆ ನೀಡಿ ಮಣೆ ಹಾಕುವ ಕೆಲಸ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಕನ್ನಡಡ ಚಿತ್ರರಂಗದ ಸೂಪರ್ ಸ್ಟಾರ್ ಶಿವರಾಜಕುಮಾರ್ (Shiva Rajkumar) ಅವರು, ಕನ್ನಡದ ವಿಷಯ ಬಂದಾಗ ತಾನು ಹೋರಾಟ ಮಾಡೇ ಮಾಡ್ತೀನಿ ಅಂತ ಪುನರುಚ್ಛಿಸಿದರು. ‘ಜೇಮ್ಸ್’ ನನ್ನ ತಮ್ಮನ ಚಿತ್ರ ಅಂತ ನಾನು ಹೋರಾಟ ಮಾಡುತ್ತಿಲ್ಲ, ಯಾವುದೇ ಕನ್ನಡ ಸಿನಿಮಾಗೆ ಅನ್ಯಾಯವಾದರೂ ನಾನು ಹೋರಾಡ್ತೀನಿ. ದಶಕಗಳ ಮೊದಲು, ಎಲೆಕ್ಟ್ರಾನಿಕ್ ಮೀಡಿಯಾ ಬರುವ ಮೊದಲೇ ನಾನು ‘ಅನುರಾಗ ಸಂಗಮ’ ಹೆಸರಿನ ಚಿತ್ರಕ್ಕಾಗಿ ಹೋರಾಡಿದ್ದೆ. ಕನ್ನಡಕ್ಕಾಗಿ ಹೋರಾಡುವ ಪ್ರಸಂಗ ಎದುರಾದಾಗ ಹಿಂತೆಗೆಯುವ ಮಾತೇ ಇಲ್ಲ ಎಂದು ಶಿವಣ್ಣ ಹೇಳಿದರು.
ಅಭಿಮಾನಿಗಳೂ ಹೋರಾಡಬೇಕು, ಸಿನಿಮಾ ಥೇಟರ್ ಮಾಲೀಕರಲ್ಲಿಗೆ ಹೋಗಿ ಯಾಕೆ ಬೇರೆ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದೀರಾ ಅಂತ ಕೇಳಬೇಕು. ಸಿನಿಮಾದ ಕಲೆಕ್ಷನ್ ಕಮ್ಮಿಯಾಗಿದ್ದರೆ ತೆಗೆಯಲಿ ಯಾರು ಬೇಡ ಅಂತಾರೆ. ಅದರೆ ಚಿತ್ರ ಚೆನ್ನಾಗಿ ಓಡುವಾಗ ತೆಗೆದು ಬೇರೆ ಪರಭಾಷೆ ಚಿತ್ರದ ಪ್ರದರ್ಶನಕ್ಕೆ ಮುಂದಾಗುವುದು ಯಾವ ನ್ಯಾಯ? ಅಂತ ಶಿವಣ್ಣ ಹೇಳಿದರು.
ಪರಭಾಷಾ ಚಿತ್ರಗಳ ಹಾವಳಿಯನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳುವುದು, ಈ ಸಮಸ್ಯೆಗೆ ಅಂತ್ಯ ಯಾವಾಗ ಅಂತ ಮಿಡಿಯಾದವರು ಕೇಳಿದಾಗ ಶಿವಣ್ಣ, ಏನೂ ಮಾಡಕ್ಕಾಗಲ್ಲ, ಸಮಸ್ಯೆ ಎದುರಾದಾಗಲೆಲ್ಲ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾ ಇರಬೇಕು. ನಾವೆಲ್ಲ ಭಾರತೀಯರು, ನಮ್ಮಲ್ಲಿ ಒಗ್ಗಟ್ಟಿರಬೇಕು. ಅದರೆ ಕನ್ನಡದ ಪ್ರಶ್ನೆ ಬಂದಾಗ ನಾವು ಹೋರಾಡಲೇ ಬೇಕು ಎಂದು ಶಿವಣ್ಣ ಹೇಳಿದರು.