ನಾಗಾಲೋಟದಲ್ಲಿ ಮೇಲೇರುತ್ತಿರುವ ಸೆನ್ಸೆಕ್ಸ್ ಶುಭ ಸೂಚಕವೇ ಅಥವಾ ಕೆಟ್ಟದ್ದೇ? ಡಾ ಬಾಲಾಜಿ ರಾವ್ ವಿವರಿಸುತ್ತಾರೆ
ಭಾರತೀಯರನ್ನು ಹಣದುಬ್ಬುರ ಕಾಡುತ್ತಿಲ್ಲ, ಅವರ ಖರೀದಿಸುವ ಸಾಮರ್ಥ್ಯ ಹೆಚ್ಚಿರುವುದರಿಂದ ಕಂಪನಿಗಳ ವಹಿವಾಟು ಸಹ ವೃದ್ಧಿಸುತ್ತಲೇ ಸಾಗುತ್ತದೆ. ಇದು ಪ್ರಗತಿಯ ಸಂಕೇತ ಅಂತ ಡಾ ಬಾಲಾಜಿ ರಾವ್ ಹೇಳುತ್ತಾರೆ.
ಖ್ಯಾತ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಅವರು ನಾಗಾಲೋಟದಲ್ಲಿ ಮೇಲೇರುತ್ತಿರುವ ಮಾರುಕಟ್ಟೆ ಸೂಚ್ಯಂಕ ಬಗ್ಗೆ ಮಾತಾಡಿದ್ದು ಅದು ಒಳ್ಳೆಯ ಸೂಚನೆಯೇ ಅಥವಾ ಶೇರುದಾರರು ಹೆದರಿಕೊಳ್ಳಬೇಕಾದ ಅವಶ್ಯಕೆಯಿದೆಯೇ ಎನ್ನುವುದನ್ನು ಸೂಕ್ತ ಉದಾರಣೆಗಳೊಂದಿಗೆ ವಿವಸಿದ್ದಾರೆ. ಸೆನ್ಸೆಕ್ಸ್ ಈಗ 62,000 ದಾಟಿದೆ ಮತ್ತು ಕಳೆದ ಕೆಲವು ತಿಂಗಳುಗಳಿಂದ ಅದು ಕೇವಲ ಏರುಗತಿಯಲ್ಲಿ ಮಾತ್ರ ಸಾಗಿದೆ. ಮಾರುಕಟ್ಟೆ ಸೂಚ್ಯಂಕ ಬಹಳ ವೇಗದಲ್ಲಿ ಮೇಲೇರುತ್ತಿರುವುದು ಅಪಾಯ ಸೂಚನೆಯೇನೂ ಅಲ್ಲ ಎಂದು ಡಾ ರಾವ್ ಹೇಳುತ್ತಾರೆ. ಹಾಗಾದರೆ ಇದು ಏನನ್ನು ಸೂಚಿಸುತ್ತದೆ? ಈ ಇಂಡೆಕ್ಸ್ ದೊಡ್ಡ ಪ್ರಮಾಣದಲ್ಲಿ ಕುಸಿದರೆ ಅಂದರೆ ಪತನಗೊಂಡಾಗ ಮಾತ್ರ ಹೆದರುವ ಪ್ರಮೇಯವಿರುತ್ತದೆ. ಶೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಸಾಮಾನ್ಯ, ಶೇಕಡಾ 5 ರಿಂದ 10 ಏರಿಳಿತಗಳು ಶೇರುದಾರರ ಮೇಲೆ ಅಂಥ ಪರಿಣಾಮವೇನೂ ಬೀರುವುದಿಲ್ಲ, ಮಾರ್ಕೆಟ್ ಪುನಃ ಚೇತರಿಸಿಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ. 1979ರಲ್ಲಿ 100 ಅಂಕಗಳೊಂದಿಗೆ ಆರಂಭವಾದ ಸೆನ್ಸೆಕ್ಸ್ ಅಕ್ಟೋಬರ್ 2021 ರಲ್ಲಿ 62,000 ತಲುಪಿದೆ.
ಕೇವಲ 30 ವರ್ಷಗಳ ಅವಧಿಯಲ್ಲಿ ಕೇವಲ 4 ಬಾರಿ ಮಾತ್ರ ಶೇರು ಮಾರಕಟ್ಟೆ ಬಹಳ ಕೆಟ್ಟದ್ದಾಗಿ ಕುಸಿದಿದೆ. 1992 ರಲ್ಲಿ ಹರ್ಷದ್ ಮೆಹ್ತಾ ಪ್ರಕರಣ, 2002 ರಲ್ಲಿ ಕೇತನ್ ಪಾರೀಖ್ ಗೊಠಾಲಾನಿಂದ ಅಪಾಯಕಾರಿಯಾಗಿ ಕುಸಿದ ನಂತರ 2008-09 ರಲ್ಲಿ ಸೂಚ್ಯಂಕ ಶೇಕಡಾ 59 ಮತ್ತು 2020 ಮಾರ್ಚ್ನಲ್ಲಿ ಶೇಕಡಾ 39ರಷ್ಟು ಮಾರ್ಕೆಟ್ ಕುಸಿದಿತ್ತು ಎಂದು ರಾವ್ ಹೇಳುತ್ತಾರೆ. ಮಾರುಕಟ್ಟೆ ಸೂಚ್ಯಂಕ ಶೇಕಡಾ 30 ಕ್ಕಿಂತ ಜಾಸ್ತಿ ಕುಸಿದಾಗ ಮಾತ್ರ ಅದು ಚಿಂತೆಗೆ ಕಾರಣವಾಗುತ್ತದೆ ಎಂದು ಅವರು ಹೇಳುತ್ತಾರೆ.
ಶೇರು ಮಾರ್ಕೆಟ್ ಹೀಗೆ ದಾಪುಗಾಲಲ್ಲಿ ಮೇಲೇರುವುದಕ್ಕೆ ಕಾರಣವೇನು ಅನ್ನವುದನ್ನು ಡಾ ರಾವ್ ವಿವರಿಸಿದ್ದಾರೆ. ಆವರು ಹೇಳುವ ಪ್ರಕಾರ ಈಗ ಮಾರ್ಕೆಟ್ ಬಹಳಷ್ಟು ಚೇತರಿಸಿಕೊಂಡಿದೆ ಮತ್ತು ಹೊಸ ಹೂಡಿಕೆದಾರ ಸಂಖ್ಯೆ ಹೆಚ್ಚುತ್ತಿದೆ. ಬ್ಯಾಂಕ್ ಗಳು ನಿಶ್ಚಿತ ಠೇವಣಿ ಮೇಲೆ ಈಗ ಕೇವಲ ಶೇಕಡ 4.9 ರಷ್ಟು ಮಾತ್ರ ಬಡ್ಡಿ ನೀಡುತ್ತಿರುವುದರಿಂದ ಜನರಿಗೆ ಶೇರು ಮಾರುಕಟ್ಟೆ ಹಣ ಹೂಡುವ ಪರ್ಯಾಯ ಸಾಧನವಾಗಿ ಕಂಡಿದೆ.
ಅಲ್ಲದೆ, ಭಾರತದಲ್ಲಿ ಕಂಪನಿಗಳು ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಿರುವುದರಿಂದ ಮಾರುಕಟ್ಟೆ ಭಾರೀ ವೇಗದಲ್ಲಿ ಮೇಲೇರುತ್ತಿದೆ ಎಂದು ರಾವ್ ಹೇಳುತ್ತಾರೆ. ಅಲ್ಲದೆ ಭಾರತೀಯರನ್ನು ಹಣದುಬ್ಬುರ ಕಾಡುತ್ತಿಲ್ಲ, ಅವರ ಖರೀದಿಸುವ ಸಾಮರ್ಥ್ಯ ಹೆಚ್ಚಿರುವುದರಿಂದ ಕಂಪನಿಗಳ ವಹಿವಾಟು ಸಹ ವೃದ್ಧಿಸುತ್ತಲೇ ಸಾಗುತ್ತದೆ. ಇದು ಪ್ರಗತಿಯ ಸಂಕೇತ ಅಂತ ಡಾ ಬಾಲಾಜಿ ರಾವ್ ಹೇಳುತ್ತಾರೆ.
ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಿರುವ ಕಂಪನಿಗಳಲ್ಲಿ ಹಣ ಹೂಡಿದರೆ ಯಾವುದೇ ಅಪಾಯ ಎದುರಾಗದು, ಆದರೆ ಹೂಡಿಕೆದಾರರಿಗೆ ತಾಳ್ಮೆ ಇರಬೇಕು. ಹೂಡಿದ ಹಣ ರಾತ್ರೋರಾತ್ರಿ ದ್ವಿಗುಣಗೊಳ್ಳವುದಿಲ್ಲ ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕು ಎಂದು ಡಾ ರಾವ್ ಹೇಳುತ್ತಾರೆ.
ಇದನ್ನೂ ಓದಿ: ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು ಅಲುಗಾಡಿದ ವಿಡಿಯೋ ವೈರಲ್; ಪೀಠಾಧಿಪತಿಗಳಿಂದ ಸ್ಪಷ್ಟನೆ