ಬೀದರ್ ಗಡಿಭಾಗದ 14 ಹಳ್ಳಿಗಳಿಗೆ ಈಗಲೂ ರಸ್ತೆಯಿಲ್ಲ, ಬಸ್ಸಿಲ್ಲ; ಶಾಲಾಮಕ್ಕಳ ಬವಣೆ ವೀಕ್ಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ
ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯನ್ನು ತಯಾರಿಸುವಂತೆ ಸಾರಿಗೆ ಸಚಿವರಿಗೆ ಸಲಹೆ ನೀಡಿದ ಮುಖ್ಯಮಂತ್ರಿಗಳು ಬೀದರ್ ಗಡಿ ಭಾಗವಾಗಿರುವುದರಿಂದ ಅಲ್ಲಿನ ಗಡಿ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ತಾವು ವಿಷಯವನ್ನು ಚರ್ಚಿಸುವುದಾಗಿ ಹೇಳಿದರು.
ಕರ್ನಾಟಕದ ಮುಕುಟದಂತಿರುವ ಬೀದರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ರಸ್ತೆ, ಸಾರಿಗೆ ವ್ಯವಸ್ಥೆ ಮತ್ತು ಕುಡಿಯುವ ನೀರಿನಂಥ ಮೂಲಭೂತ ಸೌಕರ್ಯಗಳು ಜಿಲ್ಲೆಯ ಹಲವು ಭಾಗಗಳಲ್ಲಿ ಈಗಲೂ ಅಂದರೆ, ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಟಿವಿ9 ಸ್ಟುಡಿಯೋಗೆ ಬಂದಾಗ ಬೀದರ್ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ರಸ್ತೆ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೆ ಶಾಲೆಗೆ ಹೋಗುವ ಮಕ್ಕಳು ಪಡುತ್ತಿರುವ ಬವಣೆಯನ್ನು ತೋರಿಸಲಾಯಿತು. ತೆಲಂಗಾಣದ ಜೊತೆ ಗಡಿ ಹಂಚಿಕೊಂಡಿರುವ ಜಿಲ್ಲೆಯ ಹಳ್ಳಿಗಳಲ್ಲಿ ವಾಸವಾಗಿರರುವ ಮಕ್ಕಳಿಗೆ ಓದುವ ಛಲ, ಹುಮ್ಮಸ್ಸು ಇದ್ದರೂ ಸಾರಿಗೆ ವ್ಯವಸ್ಥೆಯಿಲ್ಲದೆ ಕಿಲೋಮೀಟರ್ಗಳಷ್ಟು ದೂರ ಇರುವ ಶಾಲೆಗಳಿಗೆ ನಡೆಯಲು ಸಹ ಕಷ್ಟವಾಗುವಂಥ ಕಚ್ಚಾ ರಸ್ತೆಗಳಲ್ಲಿ ಏಳುತ್ತಾ ಬೀಳುತ್ತಾ ಹೋಗುವುದನ್ನು ಬೊಮ್ಮಾಯಿ ಅವರು ವೀಕ್ಷಿಸಿದರು.
ಮುಖ್ಯಮಂತ್ರಿಗಳಿಗೆ ಟಿವಿ9 ನಿರೂಪಕ ಸದರಿ ಸಮಸ್ಯೆಗೆ ಪರಿಹಾರ ಹೇಗೆ ಅಂತ ಕೇಳುವ ಮೊದಲು ಸಾರಿಗೆ ಸಚಿವರಾದ ಬಿ ಶ್ರೀರಾಮುಲು ಅವರನ್ನು ಪೋನಲ್ಲಿ ಲೈನಪ್ ಮಾಡಿ ಬೀದರ್ ಜಿಲ್ಲೆಯ ಮಕ್ಕಳು ಅನುಭವಿಸುತ್ತಿರುವ ಕಷ್ಟವನ್ನು ವಿವರಿಸಿದರು.
ವಿಷಯವನ್ನು ಗ್ರಹಿಸಿಕೊಂಡು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತಾಡಿ ಆದಷ್ಟು ಬೇಗ ಸಾರಿಗೆ ವ್ಯವಸ್ಥೆಯನ್ನು ಮಾಡುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದರು. ಮುಖ್ಯಮಂತ್ರಿಗಳು ಸ್ಟುಡಿಯೋನಲ್ಲಿರುವ ವಿಷಯ ಹೇಳಿದಾಗ ಗಾಬರಿಗೆ ಬಿದ್ದಂತೆ ಅನಿಸಿದ ಸಚಿವರು, ಬೊಮ್ಮಾಯಿ ಅವರಿಗೂ ಆದಷ್ಟು ಬೇಗ ರಸ್ತೆ ಮತ್ತು ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯನ್ನು ತಯಾರಿಸುವಂತೆ ಸಾರಿಗೆ ಸಚಿವರಿಗೆ ಸಲಹೆ ನೀಡಿದ ಮುಖ್ಯಮಂತ್ರಿಗಳು ಬೀದರ್ ಗಡಿ ಭಾಗವಾಗಿರುವುದರಿಂದ ಅಲ್ಲಿನ ಗಡಿ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ತಾವು ವಿಷಯವನ್ನು ಚರ್ಚಿಸುವುದಾಗಿ ಹೇಳಿದರು.
ಗಡಿಭಾಗಕ್ಕೆ ಹೊಂದಿಕೊಂಡಿರುವ 5 ಹಳ್ಳಿಗಳು ಸೇರಿದಂತೆ ಅಲ್ಲಿನ ಒಟ್ಟು 14 ಹಳ್ಳಿಗಳು ರಸ್ತೆ ಮತ್ತು ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಎಷ್ಟು ಬೇಗ ಅವರ ಸಮಸ್ಯೆಗೆ ಬಗೆಹರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕು.
ಇದನ್ನೂ ಓದಿ: ತಾಲಿಬಾನ್ ಪಡೆಗಳು ಪಂಜಶೀರ್ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದೇವೆ ಅನ್ನುತ್ತಿದ್ದರೆ, ಈ ವಿಡಿಯೋ ಭಿನ್ನ ಕತೆ ಹೇಳುತ್ತಿದೆ