ಗ್ರಾಮಸ್ಥರ ಬೆಚ್ಚಿಬೀಳಿಸಿದ ಗಜಪಡೆ: ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!
ಆನೇಕಲ್ ಪ್ರದೇಶದ ತಮಿಳುನಾಡು ಗಡಿ ಭಾಗದ ಗ್ರಾಮಗಳಲ್ಲಿ ಕಾಡಾನೆಗಳ ನಿರಂತರ ಓಡಾಟ, ಉಪಟಳ ಹೆಚ್ಚಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಕಾಡಾನೆಗಳನ್ನು ಕಾಡಿನೊಳಗೆ ಅಟ್ಟುವುದರ ಜೊತೆಗೆ, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ. ಈ ಮಧ್ಯೆ, 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.
ಆನೇಕಲ್, ಡಿಸೆಂಬರ್ 25: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ತಮಿಳುನಾಡು ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದೆ. ಕಾಡಿನಿಂದ ನಾಡಿಗೆ ದಾಗುಂಡಿ ಇಟ್ಟ ಕಾಡಾನೆಗಳ ದೊಡ್ಡ ಹಿಂಡು ರೈತರ ಬೆಳೆಗಳನ್ನು ನಾಶಪಡಿಸಿ ಆತಂಕ ಮೂಡಿಸಿದೆ. ತಮಿಳುನಾಡಿನ ಹೊಸೂರು ಸಮೀಪದ ಶಾನಮಾವು ಪ್ರದೇಶದಲ್ಲಿ ಸುಮಾರು ನಲ್ವತ್ತಕ್ಕೂ ಹೆಚ್ಚು ಕಾಡಾನೆಗಳಿರುವ ಹಿಂಡು ಕಾಣಿಸಿಕೊಂಡಿದ್ದು, ಕಳೆದ ಎರಡು ದಿನಗಳಿಂದ ಶಾನಮಾವು, ಪಿರ್ಜೆಹಳ್ಳಿ ಹಾಗೂ ನಾಯಕನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿವೆ. ಈ ಹಾವಳಿಯಿಂದಾಗಿ ರೈತರು ಬೆಳೆದ ರಾಗಿ ಸೇರಿದಂತೆ ಇತರೆ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ರಾತ್ರಿ ವೇಳೆಯಲ್ಲಿ ಕೃಷಿ ಭೂಮಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಹೊಲಗಳಲ್ಲಿ ಬೆಳೆದ ಬೆಳೆಗಳನ್ನು ತುಳಿದು ನಾಶಪಡಿಸುತ್ತಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ. ಕಾಡಾನೆಗಳ ಭಯದಿಂದಾಗಿ ರೈತರು ಹೊಲಗಳಿಗೆ ಹೋಗಲು ಕೂಡ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.