ಡಿಕೆಶಿ ಬಿಜೆಪಿಗೆ ಬಂದು ಸಿಎಂ ಆಗ್ತಾರಾ, ವಿಜಯೇಂದ್ರ ಡಿಸಿಎಂ ಆಗ್ತಾರಾ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು ನೋಡಿ

Edited By:

Updated on: Nov 22, 2025 | 2:08 PM

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶ ಬಿಜೆಪಿಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಡಿಕೆ ಶಿವಕುಮಾರ್ ಸಿಎಂ, ಬಿವೈ ವಿಜಯೇಂದ್ರ ಡಿಸಿಎಂ ಆಗುವ ವದಂತಿಗಳನ್ನು ತಳ್ಳಿಹಾಕಿದ ಅವರು, ಜನಾದೇಶ ಪಡೆದ ಸರ್ಕಾರ ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಬೇಕು ಎಂದಿದ್ದಾರೆ. INDI ಮೈತ್ರಿಕೂಟ ಅಸ್ವಾಭಾವಿಕ ಎಂದೂ ಟೀಕಿಸಿದ್ದಾರೆ.

ಹುಬ್ಬಳ್ಳಿ, ನವೆಂಬರ್ 22: ಕರ್ನಾಟಕದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದರೆ, ಬಿವೈ ವಿಜಯೇಂದ್ರ ಉಪಮುಖ್ಯಮಂತ್ರಿ ಆಗುತ್ತಾರೆ ಎಂಬ ವದಂತಿಗಳನ್ನು ಅಲ್ಲಗಳೆದಿದ್ದಾರೆ. ಅಂತಹ ಯಾವುದೇ ಯೋಚನೆ ನಮ್ಮ ಪಕ್ಷದ್ದಲ್ಲ ಎಂದರು. ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ಈ ಸರ್ಕಾರದ ಅಸ್ಥಿರತೆಯನ್ನು ನಾವು ಬಯಸುವುದಿಲ್ಲ. ಈ ಸರ್ಕಾರ ಐದು ವರ್ಷಗಳ ಕಾಲ ತಮ್ಮ ಅವಧಿಯನ್ನು ಮುಗಿಸಬೇಕು, ಇದು ನಮ್ಮ ಆಶಯ ಎಂದು ಜೋಶಿ ಹೇಳಿದ್ದಾರೆ.

ಜೋಶಿ ಅವರು ಇಂಡಿ ಮೈತ್ರಿಕೂಟದ ಕುರಿತು ಟೀಕೆ ಮಾಡಿದ್ದು, ಅದು ಪ್ರಸ್ತುತತೆ ಕಳೆದುಕೊಂಡಿದೆ ಎಂದಿದ್ದಾರೆ. ಮೈತ್ರಿಕೂಟದ ಸ್ವರೂಪ ಅಸ್ವಾಭಾವಿಕ ಎಂದ ಅವರು, ಇಂತಹ ಸಂಗತಿಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದರೂ, ಜನಾದೇಶಕ್ಕೆ ಗೌರವ ನೀಡಿ, ಸರ್ಕಾರಕ್ಕೆ ಐದು ವರ್ಷಗಳ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕೆಂಬುದು ಬಿಜೆಪಿಯ ನಿಲುವು ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ